ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆಯಲ್ಲಿ ಪತ್ತೆಯಾಗಿದ್ದ ನಿಗೂಢ ತಲೆಬುರುಡೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ದಳ (SIT) ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ತಂಡವು ಇಂದು ಘಟನಾ ಸ್ಥಳದಲ್ಲಿ ಹೈವೋಲ್ಟೇಜ್ ಕಾರ್ಯಾಚರಣೆ ನಡೆಸಿ, ಇಡೀ ಕ್ರೈಂ ಸನ್ನಿವೇಶವನ್ನು ಮರುಸೃಷ್ಟಿ (Scene Recreation) ಮಾಡಿದೆ.
ಪ್ರಕರಣದ ಪ್ರಮುಖ ಆರೋಪಿಯಾದ ಪ್ರದೀಪ್ ಕುಲಾಲ್‌ನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬಂಗ್ಲಗುಡ್ಡೆಯ ಕಾಡಿನ ಮಧ್ಯೆ ತಲೆಬುರುಡೆ ಪತ್ತೆಯಾದ ನಿಖರ ಜಾಗಕ್ಕೆ ಕರೆತರಲಾಗಿತ್ತು. ಕೃತ್ಯ ಹೇಗೆ ನಡೆಯಿತು? ತಲೆಬುರುಡೆಯನ್ನು ಎಲ್ಲಿ ಬಚ್ಚಿಡಲಾಗಿತ್ತು? ಎಂಬುದರ ಕುರಿತು ಆರೋಪಿಯಿಂದಲೇ ಅಧಿಕಾರಿಗಳು ಮಾಹಿತಿಯನ್ನು ಪಡೆದಿದ್ದಾರೆ. ಈ ವೇಳೆ ಇಡೀ ಸನ್ನಿವೇಶವನ್ನು ಎಫ್‌ಎಸ್‌ಎಲ್ ಅಧಿಕಾರಿಗಳು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ಅಧಿಕೃತ ಸ್ಥಳ ಮಹಜರು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ನಿನ್ನೆ ಬೆಳಗ್ಗೆ ಬೆಳ್ತಂಗಡಿಯ ಎಸ್‌ಐಟಿ (SIT) ಕಚೇರಿಯಲ್ಲಿ ಸುರಕ್ಷಿತವಾಗಿ ಸೀಲ್ ಮಾಡಿ ಇಡಲಾಗಿದ್ದ ತಲೆಬುರುಡೆ, ಪತ್ತೆಯಾದ ಕತ್ತಿ (ಮಾರಕಾಸ್ತ್ರ) ಮತ್ತು ಗೋಣಿ ಚೀಲವನ್ನು ಇಂದು ಅಧಿಕಾರಿಗಳು ಹೊರತೆಗೆದು, ಮತ್ತೊಮ್ಮೆ ವಿಡಿಯೋ ಮಹಜರು ನಡೆಸಿದ್ದಾರೆ. ಇವೆಲ್ಲವೂ ಕೊಲೆ ಪ್ರಕರಣವನ್ನು ಸಾಬೀತುಪಡಿಸಲು ಅತ್ಯಂತ ಪ್ರಮುಖ ಸಾಕ್ಷ್ಯಗಳಾಗಿರುವುದರಿಂದ (Crucial Evidence), ಇವುಗಳನ್ನು ಉನ್ನತ ತಾಂತ್ರಿಕ ಪರೀಕ್ಷೆಗಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ಕೇಂದ್ರ ಎಫ್‌ಎಸ್‌ಎಲ್ ಕಚೇರಿಗೆ ಕಳುಹಿಸಿಕೊಡಲು ಎಸ್‌ಐಟಿ ತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಬೆವರ ಸುರಿಸಿದ ಶ್ರಮಿಕರಿಗೆ ಸಿಗದ ಕೂಲಿ; ಧರ್ಮಸ್ಥಳ ಉತ್ಖನನ ನಡೆದು 10 ತಿಂಗಳಾದರೂ ಬಿಲ್ ಪಾವತಿಗೆ ಮೀನಮೇಷ!
ಡಿಎನ್‌ಎ (DNA) ರಿಪೋರ್ಟ್ ಮೇಲೆಯೇ ಎಲ್ಲರ ಕಣ್ಣು:
ಬೆಂಗಳೂರಿನ ಎಫ್‌ಎಸ್‌ಎಲ್ ತಜ್ಞರು ಈ ತಲೆಬುರುಡೆ ಯಾರದ್ದು? ಸಾವು ಸಂಭವಿಸಿ ಎಷ್ಟು ದಿನಗಳಾಗಿವೆ? ಮತ್ತು ಕತ್ತಿಯ ಮೇಲಿರುವ ರಕ್ತದ ಕಲೆಗಳ ಆಧಾರದ ಮೇಲೆ ವೈಜ್ಞಾನಿಕ ವರದಿ (FSL Report) ನೀಡಲಿದ್ದಾರೆ. ಈ ರಿಪೋರ್ಟ್ ಬಂದ ನಂತರವಷ್ಟೇ ಧರ್ಮಸ್ಥಳದ ಈ ಭೀಕರ ಬುರುಡೆ ರಹಸ್ಯದ ಅಸಲಿ ಸತ್ಯ ಹೊರಬೀಳಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


