ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (SIT) ಸೂಚನೆಯ ಮೇರೆಗೆ ಅಹೋರಾತ್ರಿ ಉತ್ಖನನ ನಡೆಸಿದ್ದ ಶ್ರಮಿಕರು ಮತ್ತು ಜೆಸಿಬಿ ಮಾಲೀಕರು ಈಗ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ಕಾರ್ಯ ನಡೆದು ಹತ್ತು ತಿಂಗಳು ಕಳೆದರೂ ಎರಡು ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಇನ್ನೂ ಪಾವತಿಯಾಗಿಲ್ಲ.
2025ರ ಜುಲೈ 29ರಿಂದ ಆಗಸ್ಟ್ 13ರವರೆಗೆ ಧರ್ಮಸ್ಥಳದ ಸುಮಾರು 17 ಪಾಯಿಂಟ್ಗಳಲ್ಲಿ ಎಸ್ಐಟಿ ನೇತೃತ್ವದಲ್ಲಿ ಉತ್ಖನನ ನಡೆದಿತ್ತು. ಮಳೆ ಮತ್ತು ಕಡು ಬಿಸಿಲನ್ನು ಲೆಕ್ಕಿಸದೆ ಕಾರ್ಮಿಕರು ಹಾಗೂ ಜೆಸಿಬಿ ಮಾಲೀಕರು ಅಹೋರಾತ್ರಿ ಶ್ರಮವಹಿಸಿ ಕೆಲಸ ಮಾಡಿದ್ದರು. ಶವ ಹೂತಿಟ್ಟ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನಡೆದ ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಶ್ರಮಿಕರು ದೊಡ್ಡ ಮಟ್ಟದಲ್ಲಿ ಸಹಕರಿಸಿದ್ದರು.
ಇದನ್ನೂ ಓದಿ: ಧರ್ಮಸ್ಥಳದ ಕುರಿತು ವಿವಾದಾತ್ಮಕ ಹೇಳಿಕೆ: ಗಿರೀಶ್ ಮಟ್ಟೆಣ್ಣನವರ್ ವಿರುದ್ಧ ಮತ್ತೊಂದು FIR ದಾಖಲು
ಬಾಕಿ ಇರುವ ಮೊತ್ತದ ವಿವರ:
ಜೆಸಿಬಿ ಬಾಡಿಗೆ: ಸುಮಾರು ₹71,500.
ಕಾರ್ಮಿಕರ ಕೂಲಿ: ಅಂದಾಜು ₹80,000.
ಇತರ ವೆಚ್ಚ: ಶಾಮಿಯಾನ, ಹಾರೆ, ಪಿಕಾಸು, ಕುಡಿಯುವ ನೀರು ಹಾಗೂ ವಾಹನ ಬಾಡಿಗೆ ಸೇರಿದಂತೆ ಒಟ್ಟು ಮೊತ್ತ ₹2 ಲಕ್ಷ ದಾಟಿದೆ.
ಈ ಬಿಲ್ ಪಾವತಿಯ ಹೊಣೆಗಾರಿಕೆಯ ಬಗ್ಗೆ ಪಂಚಾಯತ್ ಮತ್ತು ಎಸ್ಐಟಿ ನಡುವೆ ಹಗ್ಗಜಗ್ಗಾಟ ನಡೆದಿದೆ. “ನಮ್ಮ ವ್ಯಾಪ್ತಿಯಲ್ಲಿ ಹಣ ಭರಿಸಲು ಬರುವುದಿಲ್ಲ, ಎಸ್ಐಟಿ ನೀಡಬೇಕು” ಎಂದು ಪಂಚಾಯತ್ ಕೈತೊಳೆದುಕೊಂಡರೆ, ಎಸ್ಐಟಿ ಕಚೇರಿಗೆ ಅಲೆದಾಗ “ಬಿಲ್ ಈಗಾಗಲೇ ಕಳುಹಿಸಲಾಗಿದೆ” ಎಂಬ ಹಾರಿಕೆ ಉತ್ತರ ಸಿಗುತ್ತಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


