ಕೊಚ್ಚಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೇರಳದ ಅಟ್ಟಪ್ಪಾಡಿಯ ಆದಿವಾಸಿ ಯುವಕ ಮಧು (27) ಮೇಲಿನ ಗುಂಪು ಹಲ್ಲೆ (Mob Lynching) ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಸೋಮವಾರ (ಮೇ 25) ಅತ್ಯಂತ ಮಹತ್ವದ ತೀರ್ಪು ನೀಡಿದೆ. ವಿಶೇಷ ನ್ಯಾಯಾಲಯವು ಈ ಹಿಂದೆ ನೀಡಿದ್ದ 7 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ರದ್ದುಗೊಳಿಸಿರುವ ಹೈಕೋರ್ಟ್, 12 ಜನ ಕನ್ವಿಕ್ಟ್‌ಗಳಿಗೆ (ದೋಷಿಗಳಿಗೆ) ಜೀವಾವಧಿ ಜೈಲು ಶಿಕ್ಷೆ (Life Imprisonment) ವಿಧಿಸಿ ಆದೇಶಿಸಿದೆ.
ಮೊದಲ ಆರೋಪಿ ಖುಲಾಸೆ, 12 ಜನರಿಗೆ ಭಾರಿ ದಂಡ:
ನ್ಯಾಯಮೂರ್ತಿಗಳಾದ ಎ. ರಾಜಾ ವಿಜಯರಾಘವನ್ ಮತ್ತು ಕೆ.ವಿ. ಜಯಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಕ್ಕೆ ಸೂಕ್ತ ಪುರಾವೆಗಳಿಲ್ಲದ ಕಾರಣ ಮೊದಲ ಆರೋಪಿ ಹುಸೇನ್‌ನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ (Acquit). ಆದರೆ ಉಳಿದ 12 ದೋಷಿಗಳಿಗೆ ಜೀವಾವಧಿ ಶಿಕ್ಷೆಯೊಂದಿಗೆ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ದಂಡದ ಹಣ ವಸೂಲಿಯಾದಲ್ಲಿ ಅದರಲ್ಲಿ 30 ಲಕ್ಷ ರೂಪಾಯಿಯನ್ನು ಮೃತ ಮಧು ಅವರ ತಾಯಿಗೆ ಪರಿಹಾರವಾಗಿ ನೀಡಬೇಕು ಎಂದು ಕೋರ್ಟ್ ಕಟ್ಟುನಿಟ್ಟಾಗಿ ನಿರ್ದೇಶಿಸಿದೆ. 16ನೇ ಆರೋಪಿ ಮುನೀರ್‌ನ ಶಿಕ್ಷೆಯನ್ನು 3 ತಿಂಗಳಿಂದ 1 ವರ್ಷಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Kerala: ಕೊನೆಗೂ ಯೂಟೂಬರ್ ಶಿಮ್ಜಿತಾ ಬಂಧನ
ಹಸಿವಿನಿಂದ ಅನ್ನ ಕದ್ದಿದ್ದಕ್ಕೆ ಪ್ರಾಣ ತೆಗೆದಿದ್ದರು ಕಿರಾತಕರು!:
2018ರ ಫೆಬ್ರವರಿಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ಆದಿವಾಸಿ ಯುವಕ ಮಧು ಹಸಿವಿನಿಂದ ಕಿರಾಣಿ ಅಂಗಡಿಯೊಂದರಲ್ಲಿ ಅಕ್ಕಿ ಕದ್ದಿದ್ದಾನೆ ಎಂದು ಆರೋಪಿಸಿ ಮುಕ್ಕಾಲಿ ಜಂಕ್ಷನ್‌ನಲ್ಲಿ ಗುಂಪೊಂದು ಆತನನ್ನು ಕಾಡಿನಿಂದ ಎಳೆದುಕೊಂಡು ಬಂದು, ಕೈಗಳನ್ನು ಕಟ್ಟಿ ಭೀಕರವಾಗಿ ಹಲ್ಲೆ ನಡೆಸಿತ್ತು. ಅಷ್ಟೇ ಅಲ್ಲದೆ, ಹಲ್ಲೆಕೋರರು ಗಾಯಗೊಂಡಿದ್ದ ಮುಗ್ಧ ಯುವಕನೊಂದಿಗೆ ಸೆಲ್ಫಿ ಹಾಗೂ ವೀಡಿಯೋಗಳನ್ನು ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪೊಲೀಸರು ಆತನನ್ನು ಜೀಪ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ರಕ್ತಸ್ರಾವದಿಂದ ಮಧು ಮೃತಪಟ್ಟಿದ್ದನು.
“ಮಧು ಹಸಿವಿನಿಂದಾಗಿ ಆಹಾರ ಕದ್ದಿದ್ದ, ಆತನ ಪ್ರಾಣವನ್ನು ಬಡತನ ಮತ್ತು ಸಮಾಜದ ಕ್ರೌರ್ಯ ಬಲಿಪಡೆದಿದೆ. ಕೇರಳದ ಇತಿಹಾಸದಲ್ಲೇ ಇಂತಹ ಪ್ರಕರಣ ಮೊದಲು, ಈ ಕೃತ್ಯವೆಸಗುವ ಸಮಾಜ ವಿರೋಧಿಗಳಿಗೆ ಇದು ಕಠಿಣ ಸಂದೇಶವಾಗಬೇಕು” ಎಂದು ಹೈಕೋರ್ಟ್ ತೀರ್ಪಿನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


