ತಿರುವನಂತಪುರ: ದಕ್ಷಿಣ ಭಾರತದ ನೆರೆರಾಜ್ಯ ಕೇರಳದಲ್ಲಿ ಇಂದು (ಮೇ 27) ಮುಂಜಾನೆಯಿಂದಲೇ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭಾರಿ ಬಿರುಗಾಳಿ ಎಬ್ಬಿಸಿದ್ದಾರೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಅವರ ತಿರುವನಂತಪುರದ ಬಾಡಿಗೆ ನಿವಾಸ ಮತ್ತು ಕಣ್ಣೂರಿನ ಸ್ವಗೃಹ ಸೇರಿದಂತೆ ಒಟ್ಟು 10 ಪ್ರಮುಖ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಖಾಸಗಿ ಕರಾವಳಿ ಖನಿಜ ಕಂಪನಿಯಾದ ಕೊಚ್ಚಿ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (CMRL), ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀನಾ ಅವರಿಗೆ ಸೇರಿದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ (Exalogic Solutions) ಎಂಬ ಐಟಿ ಕಂಪನಿಗೆ ಯಾವುದೇ ಸೇವೆಗಳನ್ನು ಪಡೆಯದೆಯೇ 2018 ರಿಂದ 2019ರ ಅವಧಿಯಲ್ಲಿ ಕಾನೂನುಬಾಹಿರವಾಗಿ ಸುಮಾರು 1.72 ಕೋಟಿ ರೂಪಾಯಿ ಮಾಸಿಕ ಹಣ ಪಾವತಿ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಅಕ್ರಮ ಹಣ ವರ್ಗಾವಣೆ ತನಿಖೆಗಾಗಿ ಇಡಿ ಅಧಿಕಾರಿಗಳು ಪಿಎಂಎಲ್‌ಎ (PMLA) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನಡೆಸುತ್ತಿರುವ ತನಿಖೆ ಹಾಗೂ ಜಾರಿಗೆ ತಂದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ಸಿಎಂಆರ್‌ಎಲ್ (CMRL) ಕಂಪನಿಯು ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ನಿನ್ನೆ (ಮೇ 26) ಅರ್ಜಿಯ ಕಂಪ್ಲೀಟ್ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಇಡಿ ತನಿಖೆಗೆ ತಡೆ ನೀಡಲು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ನಿರಾಕರಿಸಿತು. ನ್ಯಾಯಾಲಯದಿಂದ ಇಡಿ ತನಿಖೆಗೆ ಗ್ರೀನ್ ಸಿಗ್ನಲ್ ಸಿಕ್ಕ ಕೇವಲ 24 ಗಂಟೆಗಳ ಒಳಗಾಗಿ ಅಧಿಕಾರಿಗಳು ಮಾಜಿ ಸಿಎಂ ನಿವಾಸಗಳ ಮೇಲೆಯೇ ದಾಳಿ ನಡೆಸಿರುವುದು ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: Kerala : ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳಿಗೆ ಕೇರಳದಲ್ಲಿ ನಿರ್ಬಂಧ
ಇತ್ತೀಚೆಗಷ್ಟೇ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ (LDF) ಅಧಿಕಾರ ಕಳೆದುಕೊಂಡು ಯುಡಿಎಫ್ (UDF) ನೇತೃತ್ವದ ಹೊಸ ಸರ್ಕಾರ ಬಂದ ಬೆನ್ನಲ್ಲೇ, ಮಾಜಿ ಸಿಎಂ ಪಿಣರಾಯಿ ವಿಜಯನ್ ಮತ್ತು ಅವರ ಪುತ್ರಿಗೆ ಇಡಿ ಕಾನೂನು ಪಾಶ ಬಿಗಿಯಾಗುತ್ತಿರುವುದು ಕೇರಳದ ರಾಜಕೀಯ ವಲಯದಲ್ಲಿ ತೀವ್ರ ತಲ್ಲಣ ಸೃಷ್ಟಿಸಿದೆ. ಪ್ರಸ್ತುತ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


