ನೀರಿನ ಟ್ಯಾಂಕ್‌ನೊಳಗಿನ ಕ್ಲಾಸ್‌ರೂಮ್‌ನಲ್ಲಿ ಅರಳಿತು ವಾಚ್‌ಮನ್ ಮಗಳ ಬದುಕು!

ಹೈದರಾಬಾದ್: ಹಠ ಮತ್ತು ಶ್ರದ್ಧೆಯಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ಅತ್ಯಂತ ಸ್ಪೂರ್ತಿದಾಯಕ ಉದಾಹರಣೆ ಇದೆ. ಹೈದರಾಬಾದ್‌ನ ಮಿಯಾಪುರದಲ್ಲಿ (Miyapur) ಶಾಲೆಯ ನಂತರ ಓದಲು ಸರಿಯಾದ ವ್ಯವಸ್ಥೆಯಿಲ್ಲದ ಬಡ ಮಕ್ಕಳಿಗಾಗಿ ಆರಂಭವಾದ ಒಂದು ಸಣ್ಣ ಪ್ರಯತ್ನ, ಇಂದು ನೂರಾರು ಕುಟುಂಬಗಳ ಹಣೆಬರಹವನ್ನೇ ಬದಲಾಯಿಸಿದೆ. ಅದೂ ಕೂಡ ಒಂದು ಹಳೆಯ ಓವರ್‌ಹೆಡ್ ನೀರಿನ ಟ್ಯಾಂಕ್‌ನ (Overhead Water Tank) ಒಳಗೆ ಸೃಷ್ಟಿಸಲಾದ ವಿಶಿಷ್ಟ ಕ್ಲಾಸ್‌ರೂಮ್‌ನಲ್ಲಿ! ಇಲ್ಲಿ ಓದಿದ ಬಡ ಕುಟುಂಬಗಳ ಮಕ್ಕಳು ಇಂದು ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಮಿಂಚುತ್ತಿದ್ದಾರೆ.

ಈ ವಿಶಿಷ್ಟ ತರಗತಿಯಲ್ಲಿ ಓದಿ ಬೆಳೆದ ಅಪಾರ ಪ್ರತಿಭೆಗಳಲ್ಲಿ ಅಕುಲ ಕಲ್ಯಾಣಿ ಕೂಡ ಒಬ್ಬರು. ತಂದೆ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರಿಂದ ಮನೆಯಲ್ಲಿ ಓದಲು ಸೌಲಭ್ಯಗಳೂ ಇರಲಿಲ್ಲ. ಆದರೆ, ನೀರಿನ ಟ್ಯಾಂಕ್‌ನ ಈ ಪುಟ್ಟ ತರಗತಿಯೇ ಆಕೆಗೆ ಜ್ಞಾನದ ಭದ್ರ ಬುನಾದಿ ಹಾಕಿಕೊಟ್ಟಿತು. ಕಠಿಣ ಪರಿಶ್ರಮದಿಂದ ಓದಿದ ಕಲ್ಯಾಣಿ, ಇಂದು ವರ್ಷಕ್ಕೆ ಬರೋಬ್ಬರಿ 20 ಲಕ್ಷ ರೂಪಾಯಿ ಪ್ಯಾಕೇಜ್ (Rs 20 Lakh Package) ಪಡೆಯುವ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಯಶಸ್ಸಿನ ಶಿಖರ ಏರಿದ್ದಾರೆ ಎಂದು ‘ದಿ ಬೆಟರ್ ಇಂಡಿಯಾ’ ವರದಿ ಮಾಡಿದೆ.

 ಈ ಅದ್ಭುತ ಕ್ರಾಂತಿಯ ಹಿಂದಿರುವ ಶಕ್ತಿ ಪೋತುಕುಚಿ ಶ್ರೀನಿವಾಸ್ (Pothukuchi Srinivas). ಜರ್ಮನ್ ಮೂಲದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಹಿರಿಯ ಉದ್ಯೋಗಿಯಾಗಿದ್ದ ಅವರು, ತಮ್ಮ ಬಿಡುವಿನ ವೇಳೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಈ ವೇಳೆ ಬಡತನ, ಮನೆಯಲ್ಲಿ ವಿದ್ಯುತ್ ಕೊರತೆ ಹಾಗೂ ಸಂಜೆ ವೇಳೆ ಪಾರ್ಟ್-ಟೈಮ್ ಕೆಲಸ ಮಾಡಬೇಕಾದ ಅನಿವಾರ್ಯತೆಯಿಂದಾಗಿ ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವರು ಮನಗಂಡರು.

ಒಂದು ದಿನ ವಿದ್ಯಾರ್ಥಿಯೊಬ್ಬ ತನ್ನ ಹೋಂವರ್ಕ್ ಏಕೆ ಮಾಡಿಲ್ಲ ಎಂದು ಶ್ರೀನಿವಾಸ್ ಪ್ರಶ್ನಿಸಿದಾಗ, ಆ ಮಗು ನೀಡಿದ ಉತ್ತರ ಅವರ ಕಣ್ಣು ತೇವಗೊಳಿಸಿತ್ತು. “ಸರ್, ನಾನು ಸಂಜೆ ವೇಳೆ ಟೀ ಅಂಗಡಿಗಳ ಗಾಡಿಗಳನ್ನು ತೊಳೆದು ಹಣ ಗಳಿಸಬೇಕು. ರಾತ್ರಿ ಮನೆಗೆ ಹೋದರೆ ಓದಲು ಕರೆಂಟ್ ಇರುವುದಿಲ್ಲ” ಎಂದು ಆ ಮಗು ಹೇಳಿತ್ತು. ಈ ಒಂದೇ ಒಂದು ಮಾತು ಶ್ರೀನಿವಾಸ್ ಅವರ ಜೀವನದ ದಿಕ್ಕನ್ನೇ ಬದಲಿಸಿತು. ತಕ್ಷಣವೇ ತಮ್ಮ ಲಕ್ಷಾಂತರ ರೂಪಾಯಿ ಸಂಬಳದ ಕಾರ್ಪೊರೇಟ್ ವೃತ್ತಿಜೀವನಕ್ಕೆ ರಾಜೀನಾಮೆ ನೀಡಿದ ಅವರು, ಬಡ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಡಲು ನಿರ್ಧರಿಸಿದರು.

ಇದನ್ನೂ ಓದಿ: ಮದುವೆಯ ಇತಿಹಾಸದಲ್ಲೇ ಇಂತಹ ರಿಟರ್ನ್ ಗಿಫ್ಟ್ ಯಾರೂ ಕೊಟ್ಟಿಲ್ಲ!: ಇಡೀ ಹಳ್ಳಿಯ ಜನರಿಗೆ 34.6 ಕೋಟಿ ರೂ. ಮೌಲ್ಯದ ವಿಮೆ ಉಡುಗೊರೆ ನೀಡಿದ ವರ!

ತಮ್ಮ ತಂದೆಯ ನೆನಪಿಗಾಗಿ 2003 ರಲ್ಲಿ ‘ಪೋತುಕುಚಿ ಸೋಮಸುಂದರ ಸೋಷಿಯಲ್ ವೆಲ್ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್’ ಅನ್ನು ಸ್ಥಾಪಿಸಿದರು. ಆರಂಭದಲ್ಲಿ ತಮ್ಮ ಸ್ವಂತ ಮನೆಯಲ್ಲೇ ತರಗತಿಗಳನ್ನು ನಡೆಸುತ್ತಿದ್ದ ಅವರು, ನಂತರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಒಂದು ಹಳೆಯ ನೀರಿನ ಟ್ಯಾಂಕ್ ಅನ್ನು ಸುಂದರ ಕ್ಲಾಸ್‌ರೂಮ್ ಆಗಿ ಪರಿವರ್ತಿಸಿದರು. ಕಳೆದ ಹಲವು ವರ್ಷಗಳಲ್ಲಿ ಈ ಟ್ರಸ್ಟ್ 1,500 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಶಾಲಾ ಫೀಸ್, ಪುಸ್ತಕಗಳು, ಯೂನಿಫಾರ್ಮ್, ಸಾರಿಗೆ ಮತ್ತು ಕೋಚಿಂಗ್ ಕ್ಲಾಸ್‌ಗಳ ಸಂಪೂರ್ಣ ವೆಚ್ಚವನ್ನು ಭರಿಸಿದೆ. ಅದರಲ್ಲೂ ವಿಶೇಷವಾಗಿ ಸಂಜೆ ತರಗತಿಗೆ ಬರುವ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು