ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಉಡುಪಿ ಜಿಲ್ಲಾ ಪ್ರವಾಸದ ವೇಳೆ ಮತ್ತೊಂದು ಹೊಸ ವಿವಾದದ ಸುಳಿಗೆ ಸಿಲುಕಿದ್ದಾರೆ. ಜಿಲ್ಲೆಯ ಪ್ರವಾಸದಲ್ಲಿದ್ದಾಗ ಅವರು ತಮ್ಮ ಕಾರಿನಲ್ಲಿ ಕುಳಿತುಕೊಂಡೇ, ಹೊರಗಡೆ ನಿಂತಿದ್ದ ಮಾಜಿ ರೌಡಿಶೀಟರ್ ಸೋನು ಸುಧೀರ್ ಎಂಬಾತನ ತಲೆ ಮುಟ್ಟಿ ಆಶೀರ್ವದಿಸಿ ಧಾವಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಯಾರು ಈ ಸೋನು ಸುಧೀರ್?:
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಂದ ಆಶೀರ್ವಾದ ಪಡೆದಿರುವ ಈ ಸೋನು ಸುಧೀರ್ ಎಂಬಾತನ ವಿರುದ್ಧ ಈಗಾಗಲೇ ಎರಡು ಗಂಭೀರ ಕಾನೂನು ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ 2021 ರಿಂದ 2023ರ ಅವಧಿಯವರೆಗೆ ಈತನ ವಿರುದ್ಧ ಅಧಿಕೃತವಾಗಿ ‘ರೌಡಿ ಶೀಟರ್’ (Rowdy Sheeter) ಪ್ರಕರಣ ಕೂಡ ದಾಖಲಾಗಿತ್ತು ಎಂಬ ಕಟು ಸತ್ಯ ಈಗ ಬಯಲಾಗಿದೆ.
ಹುದ್ದೆಯ ಘನತೆಗೆ ಧಕ್ಕೆ; ಸಾರ್ವಜನಿಕರ ಆಕ್ರೋಶ:
ಸಾಂವಿಧಾನಿಕ ಮತ್ತು ಅತ್ಯಂತ ಜವಾಬ್ದಾರಿಯುತವಾದ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನದಲ್ಲಿರುವವರೇ ಈ ರೀತಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. “ಮಹಿಳೆಯರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಯ ಪರವಾಗಿ ಧ್ವನಿ ಎತ್ತಬೇಕಾದವರೇ ರೌಡಿಶೀಟರ್‌ಗಳ ತಲೆ ಮುಟ್ಟಿ ಆಶೀರ್ವಾದ ಮಾಡಿದರೆ ಸಮಾಜಕ್ಕೆ ಯಾವ ರೀತಿಯ ಸಂದೇಶ ಹೋಗುತ್ತದೆ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಉಡುಪಿ: ಬಾವಿಗೆ ಕಲ್ಲು ಕಟ್ಟುವಾಗ ಘೋರ ದುರಂತ; ಮಣ್ಣು ಕುಸಿದು ಕೊಪ್ಪಳ ಮೂಲದ ಯುವ ಕಾರ್ಮಿಕ ಸಾವು!
ಬೆಂಬಿಡದ ಸಾಲು ಸಾಲು ವಿವಾದಗಳು!:
ಇತ್ತೀಚೆಗಷ್ಟೇ ಡಾ. ನಾಗಲಕ್ಷ್ಮೀ ಚೌಧರಿ ಅವರು ಮತ್ತೊಬ್ಬ ವಿವಾದಾತ್ಮಕ ರೌಡಿಶೀಟರ್ ಪುನೀತ್ ಕೆರೆಹಳ್ಳಿಯನ್ನು ಭೇಟಿಯಾಗಿ ಶುಭ ಹಾರೈಸಿದ್ದ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿ ವಿವಾದ ಸೃಷ್ಟಿಸಿತ್ತು. ಆ ಘಟನೆಯ ಬೆನ್ನಲ್ಲೇ ಈಗ ಉಡುಪಿಯಲ್ಲೂ ಮಾಜಿ ರೌಡಿಶೀಟರ್ ಸೋನು ಸುಧೀರ್‌ಗೆ ಆಶೀರ್ವಾದ ಮಾಡಿರುವ ದೃಶ್ಯಾವಳಿಗಳು ಮುಂಚೂಣಿಗೆ ಬಂದಿರುವುದು ಮಹಿಳಾ ಆಯೋಗದ ಅಧ್ಯಕ್ಷರ ನಡೆಗೆ ಮತ್ತಷ್ಟು ಮುಜುಗರ ತಂದಿಟ್ಟಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


