ಬೆಂಗಳೂರಿನಲ್ಲಿ ಹಳೆ ಗೆಳತಿ ಮನೆಗೆ ಬಂದಿದ್ದ ಯುವಕನ ಭೀಕರ ಕೊಲೆ!: ಮದುವೆಯಾದ್ರೂ ಮುಂದುವರಿದಿದ್ದ ಸ್ನೇಹಕ್ಕೆ ಪತಿ ಅಸಮಾಧಾನ; ದಾರುಣವಾಗಿ ಜೀವ ಕಳೆದುಕೊಂಡ ಗುಜರಿ ವ್ಯಾಪಾರಿ!

ಬೆಂಗಳೂರು : ಹಳೆಯ ಶಾಲಾ ದಿನಗಳ ಸ್ನೇಹ ಮದುವೆಯ ನಂತರವೂ ಮುಂದುವರಿದಿದ್ದಕ್ಕೆ ಆಕ್ರೋಶಗೊಂಡ ಪತಿ ಮತ್ತು ಆತನ ಸಂಬಂಧಿಕರು ಸೇರಿ ಯುವಕನೊಬ್ಬನನ್ನು ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರದ ಬೀಡಿ ಕಾಲೋನಿಯ ನಿವಾಸಿ, 27 ವರ್ಷದ ಮೊಹಮ್ಮದ್ ಕಾಸಿಫ್ (Mohammed Kasif) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮೃತನ ಗೆಳತಿಯ ಪತಿ ಅಕ್ಬರ್ ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ ಮೊಹಮ್ಮದ್ ಕಾಸಿಫ್ ರಾಮನಗರದಲ್ಲಿ ಗುಜರಿ ವ್ಯವಹಾರ ನಡೆಸಿಕೊಂಡಿದ್ದ. ಆದರೆ, ಇದಕ್ಕೂ ಮುನ್ನ ಆತ ಬೆಂಗಳೂರಿನ ಬಾಪೂಜಿನಗರದಲ್ಲಿ ವಾಸವಾಗಿದ್ದಾಗ, ಪ್ರೌಢಶಾಲಾ ದಿನಗಳಲ್ಲಿ ಅಕ್ಬರ್‌ನ ಪತ್ನಿಯ ಪರಿಚಯವಾಗಿತ್ತು. ಮೊಹಮ್ಮದ್ 10ನೇ ತರಗತಿ ಹಾಗೂ ಆಕೆ 8ನೇ ತರಗತಿಯಲ್ಲಿದ್ದಾಗಿನಿಂದಲೇ ಇಬ್ಬರ ನಡುವೆ ಆತ್ಮೀಯ ಒಡನಾಟವಿತ್ತು. ಆಕೆಗೆ ಮದುವೆಯಾದ ಮೇಲೂ ಇಬ್ಬರ ನಡುವಿನ ಸ್ನೇಹ ಮತ್ತು ಸಂಪರ್ಕ ಮುಂದುವರಿದಿತ್ತು.

ಇದನ್ನೂ ಓದಿ:Crime : ಪತ್ನಿಯನ್ನು ಹೂತ ಜಾಗದಲ್ಲೇ ನಾಯಿಯ ಶವವನ್ನು ಹೂತು ಯಾಮಾರಿಸಿದ ಪಾಪಿ ಪತಿ

ಪತಿಯ ತೀವ್ರ ವಿರೋಧದ ನಡುವೆಯೂ ಮನೆಗೆ ಭೇಟಿ:

ಪತ್ನಿ ಮತ್ತು ಮೊಹಮ್ಮದ್ ಕಾಸಿಫ್ ನಡುವಿನ ಈ ಅತಿಯಾದ ಆತ್ಮೀಯತೆಗೆ ಪತಿ ಅಕ್ಬರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಅವರಿಬ್ಬರ ಸಂಪರ್ಕ ಮುಂದುವರಿದಿತ್ತು. ಎರಡು ದಿನಗಳ ಹಿಂದೆ ಮೊಹಮ್ಮದ್ ಕಾಸಿಫ್ ಬಾಪೂಜಿನಗರದಲ್ಲಿರುವ ತನ್ನ ಗೆಳತಿಯ ಮನೆಗೆ ಬಂದಿದ್ದಾಗ ಅಕ್ಬರ್ ಹಾಗೂ ಆತನ ಸಂಬಂಧಿಕರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೇ ವಿಚಾರವಾಗಿ ತೀವ್ರ ಜಗಳ ನಡೆದು, ಆಕ್ರೋಶದ ಭರದಲ್ಲಿ ಅಕ್ಬರ್ ಮತ್ತು ಆತನ ಕಡೆಯವರು ಮೊಹಮ್ಮದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ಘಟನೆ ನಡೆದ ತಕ್ಷಣ ಬ್ಯಾಟರಾಯನಪುರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹತ್ಯೆಯ ಅಸಲಿ ಕಾರಣ ಹಾಗೂ ಇದರಲ್ಲಿ ಬೇರೆ ಯಾರ ಕೈವಾಡವಿದೆ ಎಂಬ ಬಗ್ಗೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು