ಮಂಗಳೂರು: ಮಂಗಳೂರಿನ ಸಂತ ಅಗ್ನೆಸ್ ಕಾಲೇಜಿನಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಎಬಿವಿಪಿ (ABVP) ಮುಖಂಡನಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಖಂಡಿಸಿ ಹಾಗೂ ಎಸಿಪಿ ರವೀಶ್ ನಾಯ್ಕ್ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳೂರಿನ ಕ್ಲಾಕ್ ಟವರ್ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರಿನ ಸಂತ ಅಗ್ನೆಸ್ ಕಾಲೇಜಿನಲ್ಲಿ ನಡೆದ ಪ್ರತಿಭಟನೆಯೊಂದರ ವೇಳೆ ಎಸಿಪಿ ರವೀಶ್ ನಾಯ್ಕ್ ಅವರು ಎಬಿವಿಪಿ ಮುಖಂಡನಿಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಯ ಏಕಪಕ್ಷೀಯ ಹಾಗೂ ದಬ್ಬಾಳಿಕೆಯ ನಡವಳಿಕೆಯನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಕ್ಲಾಕ್ ಟವರ್ ವೃತ್ತದಲ್ಲಿ ಜಮಾಯಿಸಿ ಸರ್ಕಾರದ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ವಿದ್ಯಾರ್ಥಿಗಳ ಮನವಿಯನ್ನು ಸ್ವೀಕರಿಸಲು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರೇ ಖುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಬರಬೇಕು ಎಂದು ಎಬಿವಿಪಿ ಮುಖಂಡರು ಸ್ಥಳದಲ್ಲಿದ್ದ ಇನ್ಸ್ಪೆಕ್ಟರ್ ಬಳಿ ಪಟ್ಟು ಹಿಡಿದು ಸೋಗು ಹಾಕಿದರು.

