ಸತತ ಬ್ಯಾಂಕ್ ಡೆಪಾಸಿಟ್‌ಗಿಂತ ಷೇರು, ಮ್ಯೂಚುವಲ್ ಫಂಡ್‌ನತ್ತ ಭಾರತೀಯರ ಒಲವು

ದೆಹಲಿ : ಕೋವಿಡ್‌ ನಂತರದ ವರ್ಷಗಳಲ್ಲಿ ಭಾರತೀಯ ಕುಟುಂಬಗಳು ತಮ್ಮ ಉಳಿತಾಯದ ಹಣವನ್ನು ಬ್ಯಾಂಕ್‌ಗಳಲ್ಲಷ್ಟೇ ಇಡದೆ ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್‌ಗಳಂತಹ ಹೂಡಿಕೆಗಳತ್ತ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದರಿಂದಾಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿನ (SCBs) ಉಳಿತಾಯ ಡೆಪಾಸಿಟ್‌ಗಳ (Savings Deposits) ಬೆಳವಣಿಗೆ ದರ ಕೊಂಚ ಮಂದಗತಿಯಲ್ಲಿದೆ ಎಂದು ಅಸೋಚಾಮ್ (ASSOCHAM) ವರದಿ ತಿಳಿಸಿದೆ.

ಅಸೋಚಾಮ್ ಗ್ಲೋಬಲ್ ರಿಸರ್ಚ್ ಪ್ರಕಟಿಸಿರುವ “ಭಾರತದಲ್ಲಿನ ವಾಣಿಜ್ಯ ಬ್ಯಾಂಕ್‌ಗಳ ಉಳಿತಾಯ ಡೆಪಾಸಿಟ್ ಮಾದರಿ” ಎಂಬ ವರದಿಯಲ್ಲಿ ಈ ಆಸಕ್ತಿದಾಯಕ ಅಂಶಗಳು ಹೊರಬಿದ್ದಿವೆ. 2015-16 ರಿಂದ 2019-20 ವಾರ್ಷಿಕ ಸರಾಸರಿ ಉಳಿತಾಯ ಡೆಪಾಸಿಟ್ ಬೆಳವಣಿಗೆ ದರ 14.8% ನಷ್ಟಿತ್ತು. 2020-21 ರಿಂದ 2024-25 ಕೋವಿಡ್ ನಂತರದ ಈ ಅವಧಿಯಲ್ಲಿ ಬೆಳವಣಿಗೆ ದರ 8.6% ಗೆ ಕುಸಿದಿದೆ.

“ಬ್ಯಾಂಕ್ ಡೆಪಾಸಿಟ್ ಬೆಳವಣಿಗೆ ದರ ಕಡಿಮೆಯಾಗಿರುವುದು ಬ್ಯಾಂಕಿಂಗ್ ವ್ಯವಸ್ಥೆಯ ದೌರ್ಬಲ್ಯವಲ್ಲ. ಬದಲಿಗೆ ಭಾರತೀಯ ಕುಟುಂಬಗಳು ತಮ್ಮ ಹಣಕಾಸು ಉಳಿತಾಯವನ್ನು ಒಂದೇ ಕಡೆ ಇಡದೆ ವಿವಿಧ ಹೂಡಿಕೆಗಳಲ್ಲಿ ತೊಡಗಿಸುತ್ತಿರುವ ಉತ್ತಮ ಬೆಳವಣಿಗೆಯಾಗಿದೆ,” ಎಂದು ವರದಿ ಹೇಳಿದೆ. ಆರ್ಥಿಕ ಸಮೀಕ್ಷೆ 2025-26 ಅನ್ನು ಉಲ್ಲೇಖಿಸಿರುವ ವರದಿಯು, ದೇಶದಲ್ಲಿ ಚಿಲ್ಲರೆ ಹೂಡಿಕೆದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದಿದೆ.

ಇದನ್ನೂ ಓದಿ: ಉಳ್ಳಾಲದಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 22ನೇ ಶಾಖೆ ಉದ್ಘಾಟನೆ

ಎಫ್‌ವೈ20 (FY20) ರಲ್ಲಿದ್ದ ೩.೧ ಕೋಟಿಯಿಂದ ಎಫ್‌ವೈ25 (FY25) ರ ವೇಳೆಗೆ 11 ಕೋಟಿಗೂ ಹೆಚ್ಚು ಜನರಿಗೆ ತಲುಪಿದೆ. ಆರ್‌ಬಿಐ (RBI) ದತ್ತಾಂಶದಂತೆ, ಭಾರತೀಯ ಕುಟುಂಬಗಳ ಒಟ್ಟು ಹಣಕಾಸು ಆಸ್ತಿಯಲ್ಲಿ ಷೇರು ಹಾಗೂ ಹೂಡಿಕೆ ಫಂಡ್‌ಗಳ ಪಾಲು ಮಾರ್ಚ್ 2019 ರಲ್ಲಿದ್ದ 15.7% ರಿಂದ ಮಾರ್ಚ್ 2025 ರ ವೇಳೆಗೆ 23% ಗೆ ಏರಿಕೆಯಾಗಿದೆ. ಮ್ಯೂಚುವಲ್ ಫಂಡ್ ಆಸ್ತಿಯ ಮೌಲ್ಯ 80 ಲಕ್ಷ ಕೋಟಿ ರೂ.ಗೂ ಅಧಿಕ ತಲುಪಿದೆ.

ಬೆಳವಣಿಗೆಯ ವೇಗ ಕಡಿಮೆಯಾಗಿದ್ದರೂ, ಒಟ್ಟು ಡೆಪಾಸಿಟ್ ಹಣ ಸ್ಥಿರವಾಗಿ ಹೆಚ್ಚುತ್ತಿದೆ. 2010-11ರಲ್ಲಿ: ಒಟ್ಟು ಉಳಿತಾಯ ಡೆಪಾಸಿಟ್ 13.77 ಲಕ್ಷ ಕೋಟಿ ರೂ. ಇತ್ತು. 2024-25 ರಲ್ಲಿ: ಇದು 65.33 ಲಕ್ಷ ಕೋಟಿ ರೂ.ಗೆ ತಲುಪಿದ್ದು, 15 ವರ್ಷಗಳಲ್ಲಿ 374% ನಷ್ಟು ಬೃಹತ್ ಏರಿಕೆ ಕಂಡಿದೆ. ಶೇ. 99.1ರಷ್ಟು ಡೆಪಾಸಿಟ್ (64.77ಲಕ್ಷ ಕೋಟಿ ರೂ.) ದೇಶೀಯ ವಾಣಿಜ್ಯ ಬ್ಯಾಂಕ್‌ಗಳಲ್ಲೇ ಇದ್ದು, ವಿದೇಶಿ ಬ್ಯಾಂಕ್‌ಗಳ ಪಾಲು ಶೇ. 1 ಕ್ಕಿಂತ ಕಡಿಮೆಯಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *