ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ (MDMA) ಎಂಬ ನಿಷೇಧಿತ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸುಮಾರು ₹46.25 ಲಕ್ಷ ಮೌಲ್ಯದ ಮಾದಕ ವಸ್ತು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತರನ್ನು ಬೋಳಂತೂರು ನಿವಾಸಿಗಳಾದ ಮಹಮ್ಮದ್ ನಿಜಾಮುದ್ದೀನ್ (30) ಮತ್ತು ಆತನ ಸಹೋದರ ಮಹಮ್ಮದ್ ಶಹೀಮ್ (19) ಎಂದು ಗುರುತಿಸಲಾಗಿದೆ.

ಪೊಲೀಸರಿಗೆ ಇಬ್ಬರು ವ್ಯಕ್ತಿಗಳು ಬೊಲೆರೋ ವಾಹನದಲ್ಲಿ ಎಂಡಿಎಂಎ ಸಾಗಣೆ ಮಾಡುತ್ತಾ ಬಂಟ್ವಾಳದತ್ತ ಬರುತ್ತಿದ್ದಾರೆ ಎಂಬ ಗುಪ್ತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದಲ್ಲಿ ಮಂಚಿ ಗ್ರಾಮದ ಪಂಜಾಲ್ ಕ್ರಾಸ್ ಬಳಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು.
ಇದನ್ನೂ ಓದಿ: ಮುಲ್ಕಿಯ ಹಳೆಯಂಗಡಿಯಲ್ಲಿ ಸರಣಿ ಅಪಘಾತ! ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಸಮಸ್ಯೆ

ಈ ವೇಳೆ ಸಾಲೆತ್ತೂರು ಕಡೆಯಿಂದ ಬಂದ ಬೊಲೆರೋ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ವೇಗವಾಗಿ ಚಲಾಯಿಸಿದ್ದಾನೆ. ಬಳಿಕ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದಾಗ, ಕಾರಿನಲ್ಲಿ ಮಾದಕ ವಸ್ತು ಪತ್ತೆಯಾಯಿತು.
ತನಿಖೆಯಲ್ಲಿ ಆರೋಪಿಗಳು ಬೆಂಗಳೂರು ನಗರದಲ್ಲಿರುವ ಅಪರಿಚಿತ ನೈಜೀರಿಯನ್ ವ್ಯಕ್ತಿಯಿಂದ ಎಂಡಿಎಂಎ ಖರೀದಿಸಿ ಮಾರಾಟಕ್ಕಾಗಿ ಸಾಗಣೆ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.
ಆರೋಪಿಗಳಿಂದ 423 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ 42,30,000), ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಪ್ತಿಯಾದ ಒಟ್ಟು ವಸ್ತುಗಳ ಮೌಲ್ಯ ಸುಮಾರು 46.25 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

