ಮಂಗಳೂರು: ಮುಲ್ಕಿಯ ಹಳೆಯಂಗಡಿ ಜಂಕ್ಷನ್‌ನಲ್ಲಿ ಮೇ 2ರ ಸಂಜೆ ಸರಣಿ ಅಪಘಾತಗಳು ಸಂಭವಿಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ಮೊದಲ ಘಟನೆಯಲ್ಲಿ ಮಂಗಳೂರಿನಿಂದ ಬಳ್ಳಾರಿ ಕಡೆಗೆ ಸಾಗುತ್ತಿದ್ದ ರಾಸಾಯನಿಕ ಟ್ಯಾಂಕರ್, ಜಂಕ್ಷನ್ ಸಮೀಪ ಬ್ಯಾರಿಕೇಡ್‌ಗಳ ಕಾರಣ ತಕ್ಷಣ ಬ್ರೇಕ್ ಹಾಕಿತು. ಇದೇ ವೇಳೆ ಕಾಸರಗೋಡಿನಿಂದ ಕೊಲ್ಲೂರು ದೇವಾಲಯದತ್ತ ಕುಟುಂಬ ಸಮೇತ ತೆರಳುತ್ತಿದ್ದ ಕಾರು ಟ್ಯಾಂಕರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಹಾನಿಯಾಗಿದ್ದು, ವಾಹನದಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಇದನ್ನೂ ಓದಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಅಗ್ನಿ ಅವಘಡ: ಆಳದಂಗಡಿ ಭಾಗದಲ್ಲಿ ಧಗಧಗ
ಇನ್ನೊಂದು ಘಟನೆಯಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರು, ಡಿವೈಡರ್ ಸಮೀಪ ತಿರುವು ಪಡೆಯುವ ವೇಳೆ ಹಿಂದಿನಿಂದ ಬಂದ ಮತ್ತೊಂದು ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ವಾಹನದ ಬಲಭಾಗಕ್ಕೆ ಹಾನಿಯಾಗಿದೆ.

ಈ ಎರಡು ಅಪಘಾತಗಳ ಪರಿಣಾಮ ಹೆದ್ದಾರಿಯಲ್ಲಿ ಪಾವಂಜೆ ದೇವಸ್ಥಾನವರೆಗೂ ವಾಹನಗಳ ಸಾಲು ನಿರ್ಮಾಣವಾಗಿ ಸಂಚಾರ ದಟ್ಟಣೆ ಉಂಟಾಯಿತು. ಹಳೆಯಂಗಡಿ ಒಳರಸ್ತೆಗಳಲ್ಲಿಯೂ ಭಾರಿ ಟ್ರಾಫಿಕ್ ಸಮಸ್ಯೆ ಕಂಡುಬಂತು.
ಮಂಗಳೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

