ಮಂಗಳೂರು: ಅಂತರರಾಷ್ಟ್ರೀಯ ಜಲಗಡಿಯಲ್ಲಿ ಕೊಲ್ಲಿ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ಒಮಾನ್ ಕರಾವಳಿ ತೀರದಲ್ಲಿ ಸಾಗುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್ ಪಡೆಗಳು ನಡೆಸಿದ ವಿನಾಶಕಾರಿ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಈ ಪೈಕಿ ಪೆರ್ನೆ ಬಿಳಿಯೂರು ನಿವಾಸಿ ರಚನ್ ಪೂಜಾರಿ ಸುರಕ್ಷಿತವಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಮರ್ಚೆಂಟ್ ನೇವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಚನ್ ಪೂಜಾರಿ ಅವರಿಗೆ ಭಾನುವಾರ ಮಧ್ಯರಾತ್ರಿ ಎದುರಾಗಿದ್ದು ಸಾಕ್ಷಾತ್ ಮೃತ್ಯು ಸದೃಶ ಪರಿಸ್ಥಿತಿ. ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ‘ಜೆಎಫ್ ಎಸ್ ಗ್ಯಾಲಕ್ಸಿ’ ಹೆಸರಿನ ವಾಣಿಜ್ಯ ಹಡಗು ಯುಎಇ ಬಂದರಿನತ್ತ ಸಾಗುತ್ತಿತ್ತು.
ಹಡಗು ಭೂಭಾಗದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದಾಗ ಇರಾನ್ ಪಡೆಗಳು ಭೀಕರ ಕ್ಷಿಪಣಿ ದಾಳಿ ನಡೆಸಿವೆ. ಹಡಗು ಮುಂದೆ ಚಲಿಸದಂತೆ ಮಾಡಲು ಇರಾನ್ ಪಡೆಗಳು ನೇರವಾಗಿ ಹಡಗಿನ ಇಂಜಿನ್ ಕೊಠಡಿಯನ್ನೇ ಗುರಿಯಾಗಿಸಿ ಈ ದಾಳಿ ನಡೆಸಿದ್ದವು. ಕ್ಷಿಪಣಿ ಅಪ್ಪಳಿಸಿದ ತಕ್ಷಣ ಇಂಜಿನ್ ಕೊಠಡಿಯಲ್ಲಿ ಭಾರಿ ಸ್ಫೋಟ ಸಂಭವಿಸಿ, ಇಡೀ ಆವರಣದಲ್ಲಿ ಬೆಂಕಿಯ ಜ್ವಾಲೆ ಆವರಿಸಿಕೊಂಡಿತು.
ಹಡಗಿನ ಒಳಗೆ ಬೆಂಕಿ ವ್ಯಾಪಿಸಿ ಪರಿಸ್ಥಿತಿ ಹತೋಟಿ ಮೀರಿದಾಗ, ರಚನ್ ಸೇರಿದಂತೆ ಹಡಗಿನಲ್ಲಿದ್ದ ಎಲ್ಲಾ ಭಾರತೀಯರು ಹಾಗೂ ಅನ್ಯದೇಶದ ಸಿಬ್ಬಂದಿ ಧೃತಿಗೆಡದೆ ಸಮಯಪ್ರಜ್ಞೆ ಮೆರೆದಿದ್ದಾರೆ. ಅಪಾಯದ ತೀವ್ರತೆಯನ್ನು ಅರಿತ ಸಿಬ್ಬಂದಿ ತಕ್ಷಣವೇ ಜೀವ ರಕ್ಷಕ ದೋಣಿಗಳ (Lifeboats) ಸಹಾಯದಿಂದ ಸಮುದ್ರಕ್ಕೆ ಜಿಗಿದು, ಹೊತ್ತಿ ಉರಿಯುತ್ತಿದ್ದ ಹಡಗಿನಿಂದ ದೂರ ಸರಿದಿದ್ದಾರೆ.
ಇದನ್ನೂ ಓದಿ: ಅಂಗನವಾಡಿ ಕೊಠಡಿಯಲ್ಲೇ 4 ವರ್ಷದ ಮಗುವಿಗೆ ಕಚ್ಚಿದ ಹಾವು
ಸಮುದ್ರದ ಮಧ್ಯೆ ಲೈಫ್‌ಬೋಟ್‌ನಲ್ಲಿದ್ದ ಸಿಬ್ಬಂದಿ ತಕ್ಷಣವೇ ಒಮಾನ್ ನೌಕಾಪಡೆಯನ್ನು (Oman Navy) ಸಂಪರ್ಕಿಸಿ ರಕ್ಷಣೆಗೆ ಧಾವಿಸುವಂತೆ ಕೋರಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಒಮಾನ್ ನೌಕಾ ಸಿಬ್ಬಂದಿ, ಸಮುದ್ರದ ಮಧ್ಯೆ ಸಿಲುಕಿದ್ದ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿ ತಮ್ಮ ಮಿಲಿಟರಿ ನೆಲೆಗೆ ಕರೆದೊಯ್ದಿದ್ದಾರೆ. ಪ್ರಸ್ತುತ ಎಲ್ಲಾ ಭಾರತೀಯ ಸಿಬ್ಬಂದಿ ಒಮಾನ್‌ನಲ್ಲೇ ಸುರಕ್ಷಿತವಾಗಿದ್ದು, ರಚನ್ ಪೂಜಾರಿ ಪ್ರಾಣಾಪಾಯದಿಂದ ಪಾರಾಗಿರುವ ವಿಷಯ ತಿಳಿದು ಬಂಟ್ವಾಳದಲ್ಲಿರುವ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

