ಬೆಳಗಾವಿ: ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಹಾಗೂ ಫ್ರಿಡ್ಜ್ ಸ್ಫೋಟದ ಭೀಕರ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸಜೀವ ದಹನವಾಗಿರುವ ಧಾಷ್ಟ್ಯಕಾರಿ ಘಟನೆ ಬೆಳಗಾವಿ ನಗರದ ಚವ್ಹಾಣ್ ಗಲ್ಲಿಯಲ್ಲಿ ಸಂಭವಿಸಿದೆ. ತಗಡಿನ ಶೆಡ್ನಿಂದ ನಿರ್ಮಿಸಲಾಗಿದ್ದ ಮನೆಯಲ್ಲಿ ಈ ಭೀಕರ ಅವಘಡ ಸಂಭವಿಸಿದ್ದು, ಮೃತರು ರಾತ್ರಿ ಊಟ ಮುಗಿಸಿ ಮಲಗಿದ್ದ ವೇಳೆಯಲ್ಲೇ ದುರಂತ ಸಂಭವಿಸಿದೆ.
ರಾತ್ರಿ ಇಡೀ ಕುಟುಂಬದ ಆರು ಮಂದಿ ಸದಸ್ಯರು ಊಟ ಮಾಡಿ ಮಲಗಿದ ಬಳಿಕ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಶಾರ್ಟ್ ಸರ್ಕ್ಯೂಟ್ ಬೆನ್ನಲ್ಲೇ ಮನೆಯಲ್ಲಿದ್ದ ಫ್ರಿಡ್ಜ್ ಭಾರಿ ರಭಸದಿಂದ ಸ್ಫೋಟಗೊಂಡಿದೆ . ಫ್ರಿಡ್ಜ್ ಮುಂಭಾಗದಲ್ಲೇ ಮಲಗಿದ್ದ ನಾಲ್ವರು ಮಹಿಳೆಯರು ಬೆಂಕಿಯ ಕೆನ್ನಾಲಿಕೆಗೆ ಸಿಲುಕಿ ತೀವ್ರವಾಗಿ ಸುಟ್ಟುಹೋಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇಡೀ ಮನೆ ತಗಡಿನ ಶೆಡ್ನಿಂದ ಆವೃತವಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಆವರಿಸಿಕೊಂಡು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ತೀವ್ರತೆಗೆ ಫ್ರಿಡ್ಜ್ ಸಂಪೂರ್ಣವಾಗಿ ಸುಟ್ಟು ಕೇವಲ ಕಬ್ಬಿಣದ ಡಬ್ಬಿಯಂತೆ ಕಪ್ಪಗಾಗಿ ಮಾರ್ಪಟ್ಟಿದೆ. ದುರಂತ ಸಂಭವಿಸಿದ ಮನೆಯಲ್ಲಿದ್ದ ಗಣಪತಿ ಮಂಟಪದ ಅಲ್ಪ ಭಾಗ ಮಾತ್ರ ಬೆಂಕಿಗೆ ಸುಟ್ಟಿದೆ. ದುರಂತದಲ್ಲಿ ನಾಲ್ವರು ಸಜೀವ ದಹನವಾಗುತ್ತಿದ್ದಂತೆಯೇ, ಘಟನೆಯಿಂದ ಆಘಾತಗೊಂಡ ಪಕ್ಕದ ಮನೆಯವರು ಶೋಕದ ನಡುವೆಯೇ ಮನೆಯಲ್ಲಿದ್ದ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿದ್ದಾರೆ.
ಇದನ್ನೂ ಓದಿ: ಬಂಗಾರಪೇಟೆಯಲ್ಲಿ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತಡರಾತ್ರಿ ಸಂಭವಿಸಿದ ಈ ಭೀಕರ ದುರಂತದಿಂದ ಚವ್ಹಾಣ್ ಗಲ್ಲಿಯಲ್ಲಿ ಶೋಕಸಾಗರ ಆವರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

