Breaking News

ಬೆಂಗಳೂರಿನಲ್ಲಿ ಸ್ಟಾಕ್ ಮಾರ್ಕೆಟ್ ಹೂಡಿಕೆ ಹೆಸರಲ್ಲಿ ವಂಚನೆ: ಕನ್ನಡ ವಿವಾದ ಎಬ್ಬಿಸಿ, ಕೊನೆಗೆ ಕ್ಷಮೆ ಕೇಳಿದ ಮಹಿಳೆ

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪ ಹೊತ್ತಿರುವ ಮಹಿಳೆಯೊಬ್ಬರು, ಹಣ ಕೇಳಲು ಬಂದ ಹೂಡಿಕೆದಾರರೊಂದಿಗೆ ಗಲಾಟೆ ಮಾಡಿ, “ಕನ್ನಡ ಮಾತನಾಡುವುದಿಲ್ಲ” ಎಂದು ಉದ್ಧಟತನ ಪ್ರದರ್ಶಿಸಿ ಸಾರ್ವಜನಿಕರ ಆಕ್ರೋಶಕ್ಕೆ ಈಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಂತ್ರಸ್ತರ ತೀವ್ರ ಪ್ರತಿಭಟನೆ ಹಾಗೂ ಪೊಲೀಸರ ಮಧ್ಯಪ್ರವೇಶದ ನಂತರ, ಆರೋಪಿ ಮಹಿಳೆ ಪೊಲೀಸ್ ಠಾಣೆಯ ಹೊರಗೆ ಬಹಿರಂಗವಾಗಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ಆರೋಪಿ ಪ್ರಿಯಾಂಕಾ ಎಂಬಾಕೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶದ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಈಗಾಗಲೇ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು.

ಹಣ ಕಳೆದುಕೊಂಡ ಹೂಡಿಕೆದಾರರು ಆಕೆಯನ್ನು ತಡೆದು ನಿಲ್ಲಿಸಿ ತಮ್ಮ ಹಣ ಹಿಂತಿರುಗಿಸುವಂತೆ ಹಾಗೂ ಪ್ರಕರಣದ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಹೂಡಿಕೆದಾರರು ಆಕೆಯೊಂದಿಗೆ ಕನ್ನಡದಲ್ಲಿ ಮಾತನಾಡುವಂತೆ ಮನವಿ ಮಾಡಿದಾಗ, ಆಕೆ ತೀವ್ರವಾಗಿ ಆಕ್ರೋಶಗೊಂಡು, ತನಗೆ ಕನ್ನಡ ಬರುವುದಿಲ್ಲ ಎಂದು ಹೇಳಿ ಕನ್ನಡಿಗರನ್ನು ಹಾಗೂ ಹೂಡಿಕೆದಾರರನ್ನು ನಿಂದಿಸಿದ್ದಾಳೆನ್ನಲಾಗಿದೆ. ಈ ಸಂಭಾಷಣೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಕ್ರೇನ್‌ನಲ್ಲಿ ತೂಗಾಡುತ್ತಾ ಸಚಿವ ಬಿ. ನಾಗೇಂದ್ರಗೆ ‘ಹನುಮ ಗದೆ’ ನೀಡಿ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿ
ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸಾರ್ವಜನಿಕರು ಗೋವಿಂದರಾಜನಗರ/ಪೀಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿ, ಆಕೆಯನ್ನು ಠಾಣೆಗೆ ಕರೆದೊಯ್ದರು. ಪೊಲೀಸರ ಭೇಟಿ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶದ ನಂತರ, ಆರೋಪಿ ಪ್ರಿಯಾಂಕಾ ಪೊಲೀಸ್ ಠಾಣೆಯ ಹೊರಗೆ ವೀಡಿಯೊ ಮೂಲಕ ಕ್ಷಮೆಯಾಚಿಸಿದ್ದಾರೆ.

“ಜೈ ಕರ್ನಾಟಕ, ಕನ್ನಡಿಗರಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಕರ್ನಾಟಕ ಅಥವಾ ಕನ್ನಡಿಗರ ಕುರಿತು ಇಂತಹ ಪದಗಳನ್ನು ಬಳಸುವುದಿಲ್ಲ. ಯಾರ ಮನಸ್ಸಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾವೆಲ್ಲರೂ ಭಾರತೀಯರು” ಎಂದು ಆಕೆ ವೀಡಿಯೊದಲ್ಲಿ ತಿಳಿಸಿದ್ದಾಳೆ. ಪ್ರಸ್ತುತ, ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *