ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿರುವ ನಿಗೂಢ ಸ್ಫೋಟವೊಂದು ತೀವ್ರ ಆತಂಕ ಹಾಗೂ ಸಂಚಲನ ಮೂಡಿಸಿದೆ. ನಿರ್ಮಾಣ ಹಂತದಲ್ಲಿದ್ದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಬ್ಯಾಟರಿ ಟಾರ್ಚ್ ಬಟನ್ ಒತ್ತಿದ ತಕ್ಷಣ ಸ್ಫೋಟ ಸಂಭವಿಸಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಆಂತರಿಕ ಭದ್ರತಾ ವಿಭಾಗ (ISD) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸಮಗ್ರ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ನಡೆದದ್ದು ಹೇಗೆ?:
ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಬುಧವಾರ) ತಡರಾತ್ರಿ ಸ್ಫೋಟ ಸಂಭವಿಸಿರುವ ಬಗ್ಗೆ ಆಸ್ಪತ್ರೆಯಿಂದ ಎಂಎಲ್ಸಿ (MLC) ವರದಿ ಬಂದ ಕೂಡಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಈ ಕಟ್ಟಡದಲ್ಲಿ ಈಗಾಗಲೇ ಕೆಲವು ಕುಟುಂಬಗಳು ವಾಸವಿವೆ. ಆದರೆ ಸ್ಫೋಟ ಸಂಭವಿಸಿದ ನಿರ್ದಿಷ್ಟ ಮನೆಯಲ್ಲಿ ಒಳಾಂಗಣ ಕೆಲಸ (Interior Work) ನಡೆಯುತ್ತಿದ್ದು, ಯಾರೂ ವಾಸವಿರಲಿಲ್ಲ.
ಈ ಘಟನೆಯಲ್ಲಿ ಓರ್ವ ಕಾರ್ಮಿಕ ಹಾಗೂ ಇನ್ನೊಬ್ಬ ಭದ್ರತಾ ಸಿಬ್ಬಂದಿ (Security Guard) ಗಾಯಗೊಂಡಿದ್ದಾರೆ. ಓರ್ವ ಗಾಯಾಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಮತ್ತೊಬ್ಬರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. “ಬ್ಯಾಟರಿ ಬಟನ್ ಒತ್ತಿದಾಗ ಸ್ಫೋಟ ಸಂಭವಿಸಿತು” ಎಂದು ಗಾಯಾಳುಗಳು ಹೇಳಿಕೆ ನೀಡಿದ್ದಾರೆ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಎಟಿಸಿ (ATC), ಬಿಡಿಡಿಎಸ್ (BDDS) ಹಾಗೂ ಎಫ್ಎಸ್ಎಲ್ (FSL) ತಜ್ಞರ ತಂಡ ಭೇಟಿ ಪರಿಶೀಲನೆ ನಡೆಸಿದೆ. ಸ್ಫೋಟಕ್ಕೆ ಬಳಸಿದ ವಸ್ತುಗಳೇನು ಎಂಬ ಬಗ್ಗೆ ಎಫ್ಎಸ್ಎಲ್ ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
ಗಾಯಗೊಂಡಿರುವ ಇಬ್ಬರೂ ವ್ಯಕ್ತಿಗಳು ಬೆಂಗಳೂರಿನವರಲ್ಲ, ಬೇರೆ ರಾಜ್ಯದವರಾಗಿದ್ದಾರೆ. ಅವರ ಹಿನ್ನೆಲೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, ಮನೆ ಮಾಲೀಕರು ಹಾಗೂ ಇತರೆ ಫ್ಲ್ಯಾಟ್ಗಳಲ್ಲಿ ವಾಸವಿರುವವರ ವಿಚಾರಣೆಯೂ ಮುಂದುವರಿದಿದೆ.
ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ
ಎನ್ಐಎ ಹಾಗೂ ಐಎಸ್ಡಿ ಎಂಟ್ರಿ:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆಂತರಿಕ ಭದ್ರತಾ ವಿಭಾಗ (ISD) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪರಾಧದ ಕಾರ್ಯವಿಧಾನ (Modus Operandi) ಪತ್ತೆ ಹಚ್ಚಲು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳೊಂದಿಗೆಯೂ ಸಂಪರ್ಕದಲ್ಲಿದ್ದೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

