ಸಿಲಿಕಾನ್ ಸಿಟಿಯಲ್ಲಿ ಖಾಕಿ ದರ್ಪ!: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್!

ಬೆಂಗಳೂರು: “ಅಧಿಕಾರ ಎಂಬುದು ರಕ್ಷಣೆಗಿರಬೇಕೇ ಹೊರತು ಶಿಕ್ಷಿಸುವುದಕ್ಕಲ್ಲ” ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುವಂತಹ ಘಟನೆಯೊಂದು ರಾಜಧಾನಿಯ ಜೆ.ಸಿ. ರಸ್ತೆ (JC Road) ಬಳಿ ನಡೆದಿದೆ. ಸಣ್ಣದೊಂದು ವಾಹನ ಸ್ಪರ್ಶದ ಕಾರಣಕ್ಕೆ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕರ ಸಮ್ಮುಖದಲ್ಲೇ ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಆಟೋ ಚಾಲಕನು ಪ್ರಯಾಣಿಕರನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದಾಗ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ಅಧಿಕಾರಿಯ ಬೈಕ್‌ಗೆ ಆಟೋ ಸಣ್ಣದಾಗಿ ಜಸ್ಟ್ ಟಚ್ (ಬ್ರಶ್) ಆಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಆಟೋ ಚಾಲಕನು ತಕ್ಷಣವೇ ಮಾನವೀಯತೆಯಿಂದ ಪೊಲೀಸ್ ಅಧಿಕಾರಿಯ ಬಳಿ ಕ್ಷಮೆಯಾಚಿಸಿದ್ದಾನೆ. ಆದಾಗ್ಯೂ, ತೀವ್ರ ಆಕ್ರೋಶಗೊಂಡ ಪೊಲೀಸ್ ಅಧಿಕಾರಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಆಟೋ ಚಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿ, ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ

ಪೊಲೀಸ್ ಅಧಿಕಾರಿಯ ಈ ವರ್ತನೆಯನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‌ನಲ್ಲಿ ಇಡೀ ಘಟನೆಯನ್ನು ಚಿತ್ರೀಕರಿಸಲು ಮುಂದಾದಾಗ, ಸದರಿ ಟ್ರಾಫಿಕ್ ಪೊಲೀಸ್ ಅಧಿಕಾರಿ ಹಲ್ಲೆಯ ಬಗ್ಗೆ ಉತ್ತರಿಸುವ ಬದಲು “ಯಾತಕ್ಕಾಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿ ವಿಡಿಯೋ ಮಾಡದಂತೆ ತಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಕಾರ್ಯಕ್ರಮಕ್ಕೂ ಮುನ್ನ ಸ್ಫೋಟಕ ವಸ್ತು ಪತ್ತೆ; ಪೊಲೀಸ್ ವಶದಲ್ಲಿ ಶಂಕಿತ

ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಕಾನೂನು ಪಾಲಕರು ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಧಿಕಾರದ ದುರ್ಬಳಕೆ ಮಾಡಿಕೊಂಡಿರುವ ಪೊಲೀಸ್ ಅಧಿಕಾರಿಯ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ