ಬೆಳ್ತಂಗಡಿ: ಕಾರಿನ ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಮ್ (Automatic Locking System) ದಿಢೀರನೆ ಆನ್ ಆದ ಕಾರಣ ಪುಟಾಣಿ ಮಗುವೊಂದು ಕಾರಿನೊಳಗೆ ಸಿಲುಕಿಕೊಂಡ ಆತಂಕಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮಡಂತ್ಯಾರಿನ ಮದ್ದಡ್ಕ ಎಂಬಲ್ಲಿ ನಡೆದಿದೆ. ಸಾರ್ವಜನಿಕರು ತಕ್ಷಣವೇ ಸಮಯಪ್ರಜ್ಞೆ ಮೆರೆದು ಕಾರಿನ ಗಾಜು ಒಡೆದು ಮಗುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ವರದಿಗಳ ಪ್ರಕಾರ, ಭಾನುವಾರ ಕಾರಿನ ಚಾಲಕ ಮದ್ದಡ್ಕ ಬಳಿ ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ, ಸಮೀಪದ ಅಂಗಡಿಯೊಂದಕ್ಕೆ ಅಗತ್ಯ ಸಾಮಗ್ರಿ ತರಲು ತೆರಳಿದ್ದರು. ಈ ವೇಳೆ ಕಾರಿನ ಇಂಜಿನ್ ಆಫ್ ಆಗಿದ್ದ ಸಂದರ್ಭದಲ್ಲೇ ಅದರಲ್ಲಿದ್ದ ಆಟೋ-ಲಾಕ್ ವ್ಯವಸ್ಥೆಯು ಇದ್ದಕ್ಕಿದ್ದಂತೆ ಸಕ್ರಿಯಗೊಂಡಿದೆ (Activate). ಇದರ ಪರಿಣಾಮವಾಗಿ ಕಾರಿನ ಒಳಗಿದ್ದ ಮಗು ಹೊರಬರಲಾಗದೆ, ಪೋಷಕರು ಒಳಗೆ ಹೋಗಲಾಗದೆ ಕಾರಿನೊಳಗೆ ಸಿಲುಕಿಕೊಳ್ಳುವಂತಾಗಿದೆ.
ಮಗು ಕಾರಿನೊಳಗೆ ಲಾಕ್ ಆಗಿ ಒದ್ದಾಡುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಜಮಾಯಿಸಿದ್ದು, ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಮತ್ತು ಪೋಷಕರು ಕಾರಿನ ಬಾಗಿಲು ತೆರೆಯಲು ಸತತ ಪ್ರಯತ್ನ ನಡೆಸಿದರೂ ತಾಂತ್ರಿಕ ಕಾರಣದಿಂದಾಗಿ ಬಾಗಿಲು ಅನ್‌ಲಾಕ್ ಮಾಡಲು ಸಾಧ್ಯವಾಗಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಾರ್ವಜನಿಕರು ಸಮಯ ವ್ಯರ್ಥ ಮಾಡದೆ ತಕ್ಷಣವೇ ಕಾರಿನ ಕಿಟಕಿಯ ಗಾಜನ್ನು ಒಡೆದು, ಒಳಗೆ ಕೈಹಾಕಿ ಬಾಗಿಲು ತೆರೆದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿಯ ದಿಡುಪೆ ಜಲಪಾತದಲ್ಲಿ ಪ್ರವಾಸಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಸರಗೋಡಿನ ಮೂವರು ಕಾಮುಕರು ಅರೆಸ್ಟ್!
ಮಗುವನ್ನು ಅತ್ಯಂತ ಸಕಾಲದಲ್ಲಿ ಹೊರತೆಗೆದ ಕಾರಣ ಯಾವುದೇ ಉಸಿರಾಟದ ತೊಂದರೆ ಅಥವಾ ಗಾಯಗಳಾಗದೆ ಮಗು ಸುರಕ್ಷಿತವಾಗಿದೆ. ಸಾರ್ವಜನಿಕರ ಈ ಅದ್ಭುತ ಸಮಯಪ್ರಜ್ಞೆಗೆ ಮತ್ತು ಸಾಹಸಕ್ಕೆ ಪೋಷಕರು ಹಾಗೂ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


