ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸ್ಥಳದ ಸಮೀಪ ಎರಡು ಜೆಲಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಭಾರೀ ಭದ್ರತಾ ಎಚ್ಚರಿಕೆ ಘೋಷಿಸಲಾಗಿದೆ. ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ಬೆಂಗಳೂರಿನ ಕಗ್ಗಲಿಪುರದ ಸಮೀಪದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಯೋಜಿಸಿದ್ದ 45ನೇ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಡೆದ ಭದ್ರತಾ ತಪಾಸಣೆಯ ವೇಳೆ ತಾತಗುಣಿ ಪ್ರದೇಶದ ರಸ್ತೆಯ ಬದಿಯಲ್ಲಿ ಜೆಲಟಿನ್ ಕಡ್ಡಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ಮೂಡುಬಿದಿರೆ: ಪಲ್ಟಿಯಾದ ಬಸ್ ಸ್ಕೂಟರ್‌ಗೆ ಡಿಕ್ಕಿ; ಹಿಂಬದಿ ಸವಾರೆ ಸಾವು
ಘಟನೆಯ ನಂತರ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಫೊರೆನ್ಸಿಕ್ ತಜ್ಞರು ಹಾಗೂ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಪತ್ತೆಯಾದ ಸ್ಫೋಟಕ ವಸ್ತುಗಳು ಪ್ರಧಾನಿ ಅವರ ಭದ್ರತೆಗೆ ಸಂಬಂಧಿಸಿದ ಬೆದರಿಕೆಯೇ ಅಥವಾ ಬೇರೆ ಕಾರಣಕ್ಕಾಗಿ ಅಲ್ಲಿ ಇರಿಸಲಾಗಿತ್ತೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ಪೊಲೀಸ್ ಮೂಲಗಳ ಪ್ರಕಾರ, ಬೆಳಗ್ಗೆ ಅನಾಮಧೇಯ ಕರೆ ಮೂಲಕ ಸ್ಫೋಟದ ಎಚ್ಚರಿಕೆ ನೀಡಲಾಗಿತ್ತು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದಾಗ ಜೆಲಟಿನ್ ಕಡ್ಡಿಗಳು ಪತ್ತೆಯಾಗಿವೆ. ಕರೆ ಮಾಡಿದ ವ್ಯಕ್ತಿಯನ್ನು ಕೊರಮಂಗಲದ ನಿವಾಸದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.


