ಬೆಂಗಳೂರು : ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಕಾಂಗ್ರೆಸ್ ಸರ್ಕಾರ ವಿತರಿಸಿರುವ ಶೂ ಮತ್ತು ಸಾಕ್ಸ್ (Shoes and Socks) ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ವಿದ್ಯಾರ್ಥಿಗಳು ಅವುಗಳನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಬಹಿರಂಗವಾಗಿ ಹರಿದಾಯ್ದಿದೆ. ರಾಜ್ಯ ಸರ್ಕಾರ ವಿತರಿಸಿದ ಶೂ-ಸಾಕ್ಸ್ ಗುಣಮಟ್ಟ ಎಷ್ಟು ಕಳಪೆಯಾಗಿದೆ ಎಂದರೆ, ಮಕ್ಕಳು ಅವುಗಳನ್ನು ಧರಿಸಲು ನಿರಾಕರಿಸಿ ರಸ್ತೆಗೆ ಎಸೆಯುತ್ತಿದ್ದಾರೆ.
ಇಲ್ಲಿದೆ ನೋಡಿ ಬಿಜೆಪಿ ಎಕ್ಸ್ ಪೋಸ್ಟ್:
ಅವಿದ್ಯಾವಂತ ಶಿಕ್ಷಣ ಸಚಿವ @Madhu_Bangarapp ಅವರೆ, ನಿಮ್ಮ ದಿವಾಳಿ ಕಾಂಗ್ರೆಸ್ ಸರ್ಕಾರ ನೀಡಿದ ಶೂ ಮತ್ತು ಸಾಕ್ಸ್ಗಳ ಗುಣಮಟ್ಟ ಕಳಪೆಯಾಗಿದೆ ಎಂದು ಮಕ್ಕಳು ಅವುಗಳನ್ನು ಬೀದಿಗೆ ಎಸೆದಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಇಂತಹ ರಿಯಾಲಿಟಿ ಚೆಕ್ ಈ ಹಿಂದೆ ನಡೆದಿರಲಿಲ್ಲ. ಮಕ್ಕಳಿಂದ “ಛೀ.. ಥೂ..” ಎನಿಸಿಕೊಂಡ ಮೇಲೂ ಸಚಿವ ಸ್ಥಾನದಲ್ಲಿ… pic.twitter.com/PWbHDKJNCS
— BJP Karnataka (@BJP4Karnataka) September 25, 2026
ಕರ್ನಾಟಕದ ರಾಜಕೀಯ ಮತ್ತು ಶೈಕ್ಷಣಿಕ ಇತಿಹಾಸದಲ್ಲೇ ಸರ್ಕಾರಿ ಯೋಜನೆಯೊಂದಕ್ಕೆ ಈ ಮಟ್ಟದ ನೈಜ ಸ್ಥಿತಿಗತಿಯ (Reality Check) ಮುಖಭಂಗ ಅನುಭವಿಸಿರಲಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ. ವಿದ್ಯಾರ್ಥಿಗಳಿಂದಲೇ ಈ ಮಟ್ಟದ ವಿರೋಧ ಮತ್ತು ಜಿಗುಪ್ಸೆ ವ್ಯಕ್ತವಾದ ಮೇಲೆಯೂ ಮಧು ಬಂಗಾರಪ್ಪ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುತ್ತಿರುವುದು ದುರಂತ. ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಪ್ರಸ್ತುತ ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸರ್ಕಾರಿ ಶಾಲೆಗಳ ಸರಬರಾಜು ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮ ಹಾಗೂ ಕಳಪೆ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲೂ ಚರ್ಚೆಗಳು ಆರಂಭವಾಗಿವೆ.

