ವೈರಲ್ ಸೆಂಕಿನಿಂದ (Viral Infection) ಚೇತರಿಸಿಕೊಂಡ ತಕ್ಷಣ ದೇಹ ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಮರಳುವುದಿಲ್ಲ. ಜ್ವರ ಹಾಗೂ ಇತರ ಲಕ್ಷಣಗಳು ಕಡಿಮೆಯಾದ ಮೇಲೂ ಕೆಲವರಲ್ಲಿ ಗಮನ ಕೊರತೆ, ಆಯಾಸ ಹಾಗೂ ಮರೆವಿನಂತಹ ಸಮಸ್ಯೆಗಳು ಕಂಡುಬರುತ್ತವೆ. ಇದನ್ನು ವೈದ್ಯಕೀಯ ಲೋಕದಲ್ಲಿ ‘ಬ್ರೈನ್ ಫಾಗ್’ (Brain Fog) ಎಂದು ಕರೆಯಲಾಗುತ್ತದೆ.
ಈ ಕುರಿತು ನ್ಯೂಸ್‌೯ ಡಿಜಿಟಲ್‌ಗೆ ಮಾಹಿತಿ ನೀಡಿರುವ ನವದೆಹಲಿಯ ಪಿಎಸ್‌ಆರ್‌ಐ ನೂರೋಸೈನ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಖ್ಯಾತ ನರರೋಗ ತಜ್ಞ ಡಾ. ನಿತಿನ್ ಕುಮಾರ್ ಸೇಥಿ, ಬ್ರೈನ್ ಫಾಗ್ ಲಕ್ಷಣಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಬ್ರೈನ್ ಫಾಗ್ ಎಂದರೆ ಏನು? ಮತ್ತು ಇದು ಏಕೆ ಉಂಟಾಗುತ್ತದೆ?
ವೈರಲ್ ಸೋಂಕು ತಗುಲಿ ಗುಣಮುಖರಾದ ಮೇಲೂ ಮಾನಸಿಕವಾಗಿ ಮಂದವಾಗುವುದು, ಏಕಾಗ್ರತೆ ಸಿಗದಿರುವುದು, ಸಣ್ಣಪುಟ್ಟ ವಿಷಯಗಳನ್ನು ಮರೆಯುವುದು ಹಾಗೂ ತೀವ್ರ ಮಾನಸಿಕ ಆಯಾಸ ಉಂಟಾಗುವುದನ್ನು ಬ್ರೈನ್ ಫಾಗ್ ಎನ್ನಲಾಗುತ್ತದೆ.
ರೋಗನಿರೋಧಕ ಶಕ್ತಿಯ ಸಕ್ರಿಯತೆ: ಸೋಂಕು ಕಡಿಮೆಯಾದ ಮೇಲೂ ದೇಹದ ರೋಗನಿರೋಧಕ ವ್ಯವಸ್ಥೆ ಕೆಲವು ದಿನಗಳ ಕಾಲ ಸಕ್ರಿಯವಾಗಿರುತ್ತದೆ.
ಇತರ ಕಾರಣಗಳು: ಸರಿಯಾದ ನಿದ್ರೆಯಿಲ್ಲದಿರುವುದು, ನಿರ್ಜಲೀಕರಣ (Dehydration), ಪೌಷ್ಟಿಕ ಆಹಾರದ ಕೊರತೆ, ಒತ್ತಡ ಹಾಗೂ ದೈಹಿಕ ಬಲಹೀನತೆಗಳು ಏಕಾಗ್ರತೆಯ ಮೇಲೆ ಪ್ರಭಾವ ಬೀರುತ್ತವೆ.
ಚೇತರಿಕೆಗೆ ವೈದ್ಯರ ಪ್ರಮುಖ ಸಲಹೆಗಳು:
ಸಾಮಾನ್ಯ ಮಟ್ಟದ ಬ್ರೈನ್ ಫಾಗ್ ಲಕ್ಷಣಗಳಿದ್ದರೆ ಆತಂಕಪಡುವ ಅಗತ್ಯವಿಲ್ಲ. ಸೂಕ್ತ ಆರೈಕೆಯಿಂದ ಇದನ್ನು ಸರಿಪಡಿಸಬಹುದು.
ಸಾಕಷ್ಟು ನಿದ್ರೆ ಮತ್ತು ನೀರು: ಸೂಕ್ತ ಪ್ರಮಾಣದ ನಿದ್ರೆ ಹಾಗೂ ದೇಹ ನಿರ್ಜಲೀಕರಣಗೊಳ್ಳದಂತೆ ನೀರು ಮತ್ತು ದ್ರವಾಹಾರ ಸೇವನೆ ಅಗತ್ಯ.
ಸಮತೋಲಿತ ಆಹಾರ: ಪೌಷ್ಟಿಕಾಂಶಯುಕ್ತ ಸಮತೋಲಿತ ಆಹಾರ ಸೇವಿಸಬೇಕು.
ಆರಂಭದಲ್ಲೇ ಕಠಿಣ ಶ್ರಮ ಬೇಡ: ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವಾಗ ತಕ್ಷಣವೇ ಕಠಿಣ ಕೆಲಸ ಅಥವಾ ವ್ಯಾಯಾಮಕ್ಕೆ ಹಿಂತಿರುಗದೆ, ಹಂತ-ಹಂತವಾಗಿ ಹಳೆಯ ದಿನಚರಿಗೆ ಮರಳಬೇಕು.
ಇದನ್ನೂ ಓದಿ: ಯುವಜನರಲ್ಲೇ ಹೆಚ್ಚುತ್ತಿರುವ ಹೃದಯಾಘಾತ: ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವಿಕೆ ಕುರಿತ ಸಮಗ್ರ ಮಾಹಿತಿ
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು? (ಎಚ್ಚರಿಕೆಯ ಲಕ್ಷಣಗಳು):
ಬ್ರೈನ್ ಫಾಗ್ ವಾರಗಟ್ಟಲೆ ಮುಂದುವರಿದರೆ ಅಥವಾ ದಿನನಿತ್ಯದ ಕೆಲಸಗಳಿಗೆ ಅಡ್ಡಿಯುಂಟುಮಾಡಿದರೆ ತಕ್ಷಣ ವೈದ್ಯರನ್ನು ಕಾಣುವುದು ಸೂಕ್ತ.
ತುರ್ತು ವೈದ್ಯಕೀಯ ಚಿಕಿತ್ಸೆಯ ಲಕ್ಷಣಗಳು:
ಹಠಾತ್ ಗೊಂದಲ ಅಥವಾ ಮಾತು ತೊದಲುವಿಕೆ
ದೇಹದ ಒಂದು ಭಾಗದಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ
ಮೂರ್ಛೆ ರೋಗ (Seizures), ತೀವ್ರ ತಲೆನೋವು ಅಥವಾ ತಲೆಸುತ್ತು
ನಡೆದಾಡಲು ತೊಂದರೆ ಹಾಗೂ ವರ್ತನೆಯಲ್ಲಿ ಇದ್ದಕ್ಕಿದ್ದಂತೆ ಉಂಟಾಗುವ ಬದಲಾವಣೆಗಳು
ಬ್ರೈನ್ ಫಾಗ್ ಕೇವಲ ಲಕ್ಷಣ, ರೋಗವಲ್ಲ!
ಡಾ. ಸೇಥಿ ಅವರ ಪ್ರಕಾರ, ಬ್ರೈನ್ ಫಾಗ್ ಎಂಬುದು ಒಂದು ಲಕ್ಷಣವೇ ಹೊರತು ಅದೊಂದೇ ರೋಗವಲ್ಲ. ರಕ್ತಹೀನತೆ (Anaemia), ಥೈರಾಯ್ಡ್ ಸಮಸ್ಯೆ, ಪೌಷ್ಟಿಕಾಂಶದ ಕೊರತೆ, ನಿದ್ರಾಹೀನತೆ ಅಥವಾ ಖಿನ್ನತೆಯಿಂದಲೂ ಈ ರೀತಿ ಆಗಬಹುದು. ಆದ್ದರಿಂದ ವೈರಲ್ ಜ್ವರ ಬಂದಿತ್ತು ಎಂಬ ಕಾರಣಕ್ಕಷ್ಟೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ, ವೈದ್ಯರ ಸಲಹೆ ಪಡೆಯುವುದು ಉತ್ತಮ.

