ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಖಡಕ್ ಎಚ್ಚರಿಕೆ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಸಲ್ಲಿಸಲಾದ ‘ಫಾರ್ಮ್-7’ (Form-7) ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಂಡರೆ ಅಥವಾ ಅವರನ್ನು ಕಿರುಕುಳಕ್ಕೊಳಪಡಿಸಿದರೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ (B.S. Yediyurappa) ಎಚ್ಚರಿಸಿದ್ದಾರೆ.

ಈ ಸಂಬಂಧ ಶನಿವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG&IGP) ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗವು ಮನವಿ ಪತ್ರ ಸಲ್ಲಿಸಿತು. ಫಾರ್ಮ್-7 ಗೆ ಸಂಬಂಧಿಸಿದ ದೂರುಗಳು ಮತ್ತು ಪ್ರಕರಣಗಳನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ಸಂಪೂರ್ಣವಾಗಿ ಕಾನೂನು ಚೌಕಟ್ಟಿನಡಿಯಲ್ಲಿ ಮಾತ್ರವೇ ನಿರ್ವಹಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರುಗಳನ್ನು ತೆಗೆದುಹಾಕಲು ನಿಯಮಾನುಸಾರ ‘ಫಾರ್ಮ್-7’ ಅರ್ಜಿ ಸಲ್ಲಿಸಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರವು ರಾಜಕೀಯ ದುರುದ್ದೇಶದಿಂದ ಸುಳ್ಳು ಪ್ರಕರಣಗಳನ್ನು (FIR) ದಾಖಲಿಸುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. “ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ನಾಯಕರ ಮಾತು ಕೇಳಿ ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸರು ಇದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ನಾವು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ” ಎಂದು ಬಿಎಸ್ ವೈ ವಾರ್ನಿಂಗ್ ನೀಡಿದ್ದಾರೆ.

ಬಿಜೆಪಿ ಸಲ್ಲಿಸಿರುವ ಫಾರ್ಮ್-7 ಅರ್ಜಿಗಳಲ್ಲಿ ನಿಯಮಬದ್ಧವಾಗಿರುವುದನ್ನು ಸ್ವೀಕರಿಸಿ, ತಪ್ಪಿದ್ದಲ್ಲಿ ತಿರಸ್ಕರಿಸಲಿ. ಆದರೆ, ಅದರ ಹೆಸರಿನಲ್ಲಿ ಕಾರ್ಯಕರ್ತರನ್ನು ಗುರಿಯಾಗಿಸಿ ಪೋಲಿಸ್ ಕೇಸ್ ಹಾಕಿ ಕಿರುಕುಳ ನೀಡುವುದನ್ನು ತಡೆದು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಇಲಾಖೆಯು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿಯಬಾರದು.

ಇದನ್ನೂ ಓದಿ: ವಿಧಾನಸೌಧದಲ್ಲಿ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರದ ನಿರ್ಧಾರ: ವೋಟ್‌ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಆಕ್ರೋಶ

ಫಾರ್ಮ್-7 ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದರೂ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮಾತ್ರ ನಡೆಯಬೇಕು. ಭಾರತೀಯ ಚುನಾವಣಾ ಆಯೋಗವು (ECI) ನೀಡಿರುವ ಹಕ್ಕಿನ ಪ್ರಕಾರವೇ ಫಾರ್ಮ್-7 ಅರ್ಜಿಗಳನ್ನು ಆಕ್ಷೇಪಣೆಗಾಗಿ ಸಲ್ಲಿಸಲಾಗಿದ್ದು, ಅರ್ಜಿ ಸಲ್ಲಿಸುವುದನ್ನೇ ಅಪರಾಧ ಎಂದು ಬಿಂಬಿಸುವುದು ಕಾನೂನುಬಾಹಿರವಾಗಿದೆ. ಈ ಸಂದರ್ಭದಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಹಲವು ಹಿರಿಯ ಶಾಸಕರು ಮತ್ತು ಸಂಸದರು ನಿಯೋಗದಲ್ಲಿದ್ದರು.

Leave a Reply

Your email address will not be published. Required fields are marked *