ಬೆಂಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಅಖಾಡ ರಂಗೇರಿದೆ. ಈ ನಡುವೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಕುರಿತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಅಭ್ಯರ್ಥಿಗಳ ಪರವಾಗಿ ಯತ್ನಾಳ್ ಸೇರಿದಂತೆ ಯಾರೇ ಬಂದು ಪ್ರಚಾರ ಮಾಡಿದರೂ ನಾವು ಸ್ವಾಗತಿಸುತ್ತೇವೆ. ನಮಗೆ ಪಕ್ಷದ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ. ಪ್ರಚಾರ ನಡೆಸಲು ಎಲ್ಲರಿಗೂ ಅವಕಾಶವಿದೆ, ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವಿಶ್ವದ ನಂಬರ್ 1 ಲೀಡರ್ ಮೋದಿ: ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿಗೆ ಅಗ್ರಸ್ಥಾನ!
“ನಾನು ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದೇನೆ. ಏಪ್ರಿಲ್ 5 ಮತ್ತು 6 ರಂದು ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಮತಯಾಚನೆ ಮಾಡುತ್ತೇನೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಅಂತರದಿಂದ ಗೆಲ್ಲುವ ನೂರಕ್ಕೆ ನೂರು ವಿಶ್ವಾಸ ನನಗಿದೆ” ಎಂದು ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ರಾಜ್ಯ ಸರ್ಕಾರವೇ ಉಪಚುನಾವಣಾ ಪ್ರಚಾರದಲ್ಲಿ ತೊಡಗಿರುವುದನ್ನು ಟೀಕಿಸಿದ ಅವರು, “ಸಿಎಂ ಅವರೇ ನಾಲ್ಕೈದು ದಿನ ಅಲ್ಲಿ ಬೀಡುಬಿಟ್ಟಿದ್ದಾರೆ ಎಂದರೆ ಅವರಿಗೆ ಚುನಾವಣಾ ಸೋಲಿನ ಭಯ ಕಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ” ಎಂದು ಲೇವಡಿ ಮಾಡಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


