ಬೈಂದೂರು (ಉಡುಪಿ): ಗರ್ಭಿಣಿ ಪತ್ನಿಗೆ ನಕಲಿ ನರ್ಸ್ ಮೂಲಕ ವಿಷದ ಇಂಜೆಕ್ಷನ್ ಕೊಡಿಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಪತಿ ಹಾಗೂ ಆತನ ಪ್ರೇಯಸಿಯ ಶವಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಸೌಪರ್ಣಿಕಾ ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಘಟನೆಯಿಂದಾಗಿ ಕಳೆದ 20 ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಕೊಲೆ ಯತ್ನ ಪ್ರಕರಣಕ್ಕೆ ಇದೀಗ ಕರುಣಾಜನಕ ಅಂತ್ಯ ದೊರೆತಿದೆ ಮೃತರನ್ನು ಚಾರ್ತಾಳಿ ಗ್ರಾಮದ ನಿವಾಸಿ, ಆಟೋ ಚಾಲಕ ವಿಠಲ ನಾಯ್ಕ್ (35) ಹಾಗೂ ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಆತನ ಪ್ರೇಯಸಿ ಭವ್ಯ (33) ಎಂದು ಗುರುತಿಸಲಾಗಿದೆ.
ಗರ್ಭಿಣಿ ಪತ್ನಿಗೆ ವಿಷ ನೀಡಲು ‘ನರ್ಸ್’ ಆದ ಪ್ರೇಯಸಿ
ಕಳೆದ ಸೆಪ್ಟೆಂಬರ್ 11 ರಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಆಘಾತಕಾರಿ ಪ್ರಕರಣವೊಂದು ದಾಖಲಾಗಿತ್ತು. ವಿಠಲ ನಾಯ್ಕ್ ತನ್ನ ಗರ್ಭಿಣಿ ಪತ್ನಿಯನ್ನು ಮುಗಿಸಿ ಪ್ರೇಯಸಿ ಜೊತೆ ಬಾಳಲು ದುಷ್ಟ ಸಂಚು ರೂಪಿಸಿದ್ದ. ಪತ್ನಿಗೆ ಅನಾರೋಗ್ಯದ ನೆಪ ಹೇಳಿ, ತನ್ನ ಪ್ರೇಯಸಿ ಭವ್ಯಳನ್ನು ‘ಹೋಮ್ ನರ್ಸ್’ ಎಂದು ಪರಿಚಯಿಸಿ ಮನೆಗೆ ಕರೆತಂದಿದ್ದ.
ಬಳಿಕ ಭವ್ಯ ಮೂಲ ಹಾಗೂ ಪತಿಗೆ ತಿಳಿಯದಂತೆ ಗರ್ಭಿಣಿಗೆ ವಿಷದ ಇಂಜೆಕ್ಷನ್ ನೀಡಿದ್ದಳು. ಅಸ್ವಸ್ಥಗೊಂಡ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ, ಇತ್ತ ವಿಠಲ ನಾಯ್ಕ್ ತನ್ನ ಪ್ರೇಯಸಿ ಭವ್ಯಳೊಂದಿಗೆ ಪರಾರಿಯಾಗಿದ್ದ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಲಭಿಸಿದ್ದರಿಂದ ಗರ್ಭಿಣಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಸೌಪರ್ಣಿಕಾ ನದಿ ದಂಡೆಯಲ್ಲಿ ಕೊಳೆತ ಶವಗಳು: ಆತ್ಮಹತ್ಯೆ ಶಂಕೆ
ಪರಾರಿಯಾಗಿದ್ದ ಜೋಡಿಗಾಗಿ ಬೈಂದೂರು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು. ಆದರೆ ಇಂದು ಗೋಳಿಹೊಳೆ ಗ್ರಾಮದ ಸೌಪರ್ಣಿಕಾ ನದಿ ತೀರದ ನಿರ್ಜನ ಅರಣ್ಯ ಪ್ರದೇಶದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿದಾಗ ವಿಠಲ ಹಾಗೂ ಭವ್ಯ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಪೋಲಿಸ್ ತನಿಖೆಯ ಭಯ ಹಾಗೂ ಸಮಾಜಕ್ಕೆ ಮುಖ ತೋರಿಸಲಾಗದೆ ಇಬ್ಬರೂ ವಿಷ ಸೇವಿಸಿ ಅಥವಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಕಳ್ಳರ ಪ್ಲಾನ್ ಉಲ್ಟಾ: ಎಟಿಎಂ ಒಡೆಯುತ್ತಿದ್ದ ಖದೀಮರನ್ನು 5 ನಿಮಿಷದಲ್ಲಿ ಲಾಕ್ ಮಾಡಿದ ಪೊಲೀಸರು
ಪೊಲೀಸ್ ತನಿಖೆ ತೀವ್ರ:
ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿಗೆ ನಿಖರ ಕಾರಣ ತಿಳಿಯಲು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

