ಬರ್ಕ್ಲಿ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಬರ್ಕ್ಲಿ ನಗರದಲ್ಲಿ ಅತ್ಯಂತ ಕ್ರೂರ ಹಾಗೂ ಹೃದಯವಿದ್ರಾವಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಪತ್ತೆಯಾಗಿದ್ದ 37 ವರ್ಷದ ಮಹಿಳೆಯೊಬ್ಬರ ಬೆತ್ತಲೆ ಶವವು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಸ್ಥಿತಿಯಲ್ಲಿ, ರೋಲಿಂಗ್ ಸೂಟ್‌ಕೇಸ್ (Rolling Suitcase) ಒಳಗಡೆ ಪತ್ತೆಯಾಗಿದೆ. ಈ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಆಕೆಯ 28 ವರ್ಷದ ಪ್ರೇಮಿ ಡೆಮಾರ್ಕಸ್ ಜೋನ್ಸ್ (Demarcus Jones) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಗೆ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಮೃತ ಮಹಿಳೆಯು ಮೇ 24 ರಂದು ತನ್ನ ಪ್ರೇಮಿ ಡೆಮಾರ್ಕಸ್ ಜೋನ್ಸ್ ಜೊತೆಗೆ ಅಪಾರ್ಟ್‌ಮೆಂಟ್ ಒಳಗೆ ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಕೊನೆಯದಾಗಿ ಸೆರೆಯಾಗಿತ್ತು. ಆದರೆ, ಅದಾಗಿ ಎರಡು ದಿನಗಳ ನಂತರ ಅಂದರೆ ಮೇ 26 ರಂದು, ಆರೋಪಿ ಜೋನ್ಸ್ ಕಪ್ಪು ಬಣ್ಣದ ದೊಡ್ಡ ರೋಲಿಂಗ್ ಸೂಟ್‌ಕೇಸ್ ಹಿಡಿದುಕೊಂಡು ಒಂಟಿಯಾಗಿ ಅದೇ ಅಪಾರ್ಟ್‌ಮೆಂಟ್‌ಗೆ ವಾಪಸ್ ಬರುತ್ತಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಮಹಿಳೆಯ ಕುಟುಂಬಸ್ಥರು ಮತ್ತು ಸ್ನೇಹಿತರು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಇದರಿಂದ ಆತಂಕಗೊಂಡ ಸಂಬಂಧಿಕರು ಮೇ 30 ರಂದು ಅಪಾರ್ಟ್‌ಮೆಂಟ್‌ನ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ. ಮ್ಯಾನೇಜರ್ ರೂಮ್ ತೆರೆದು ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ ಶವ ಪತ್ತೆಯಾಗಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಮಹಿಳೆಯ ತಲೆಗೆ ಬಲವಾದ ವಸ್ತುವಿನಿಂದ ಹೊಡೆದಿರುವುದು ಮತ್ತು ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗಳಾಗಿರುವುದು ದೃಢಪಟ್ಟಿದೆ. ಜೂನ್ 2 ರಂದು ಪೊಲೀಸರು ಆರೋಪಿ ಜೋನ್ಸ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. “ನಾನೇ ಆಕೆಯನ್ನು ಕೊಲೆ ಮಾಡಿ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ್ದೆ. ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ತುರುಕಿ, ಹೆಣದ ವಾಸನೆ ಹೊರಗೆ ಬಾರದಂತೆ ತಡೆಯಲು ಮನೆಯ ಕಿಟಕಿಗಳನ್ನು ತೆರೆದು ಒಳಗಡೆ ‘ಏರ್ ಪ್ಯೂರಿಫೈಯರ್’ ಆನ್ ಮಾಡಿ ಬಂದಿದ್ದೆ” ಎಂದು ಪೊಲೀಸರ ಮುಂದೆ ಆಘಾತಕಾರಿ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ: ಸ್ವಂತ ತಂದೆಯಿಂದಲೇ ದೌರ್ಜನ್ಯಕ್ಕೊಳಗಾಗಿದ್ದ ಮೂವರು ಬಾಲಕರಿಗೆ ತಲಾ 10 ಲಕ್ಷ ರೂ. ಪರಿಹಾರ!
ಡೆಮಾರ್ಕಸ್ ಜೋನ್ಸ್ ಈ ಹಿಂದೆಯೂ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಎನ್ನಲಾಗಿದೆ. 2019 ರಲ್ಲಿ ವ್ಯಕ್ತಿಯೊಬ್ಬರ ಮೇಲೆ ತೀವ್ರ ಹಲ್ಲೆ ನಡೆಸಿ, ನಿಂದಿಸಿದ್ದ ಪ್ರಕರಣದಲ್ಲಿ ಈತ ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ ಪ್ರೊಬೇಷನ್ (Probation) ಅವಧಿಯಲ್ಲಿದ್ದನು. ಸದ್ಯ ಈತನ ಮೇಲೆ ಜೂನ್ 4 ರಂದು ಕೊಲೆ ಮೊಕದ್ದಮೆ (Murder Charge) ದಾಖಲಿಸಲಾಗಿದ್ದು, ಯಾವುದೇ ಜಾಮೀನು ನೀಡದೆ ಜೈಲಿಗಟ್ಟಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


