ದೆಹಲಿ : ದೇಶದ ಗ್ರಾಮೀಣ ಭಾಗದ ಗೃಹಬಳಕೆ ಎಲ್ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಭಾರಿ ಸಮಾಧಾನಕರ ಸುದ್ದಿ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎರಡು ಸಿಲಿಂಡರ್ಗಳ ಬುಕಿಂಗ್ ನಡುವೆ ಇದ್ದ ಕನಿಷ್ಠ 45 ದಿನಗಳ ಕಾಯುವಿಕೆಯ ಅವಧಿಯನ್ನು (Waiting Period) ಈಗ 25 ದಿನಗಳಿಗೆ ಇಳಿಕೆ ಮಾಡಲಾಗಿದೆ.
ಇದರೊಂದಿಗೆ ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳ ಗ್ರಾಹಕರಿಗೆ ಒಂದೇ ರೀತಿಯ ಬುಕಿಂಗ್ ನಿಯಮ ಅನ್ವಯವಾಗಲಿದೆ. ಈ ನೂತನ ನಿಯಮವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೊಸ ಎಲ್ಪಿಜಿ ಬುಕಿಂಗ್ ನಿಯಮದಲ್ಲೇನಿದೆ?:
ಏಕರೂಪದ ನಿಯಮ: ಇನ್ಮುಂದೆ ನಗರ ಮತ್ತು ಗ್ರಾಮೀಣ ಪ್ರದೇಶದ ಗೃಹಬಳಕೆಯ ಎಲ್ಪಿಜಿ ಗ್ರಾಹಕರು ತಮ್ಮ ಮೊದಲ ಸಿಲಿಂಡರ್ ಕಾಯ್ದಿರಿಸಿದ ೨೫ ದಿನಗಳ ನಂತರವೇ ಮುಂದಿನ ರೀಫಿಲ್ ಬುಕ್ ಮಾಡಲು ಅರ್ಹರಿರುತ್ತಾರೆ.
ಗ್ರಾಮೀಣ ಜನರಿಗೆ 20 ದಿನಗಳ ರಿಲೀಫ್: ಈ ಹಿಂದೆ ಗ್ರಾಮೀಣ ಭಾಗದ ಜನರು ಎರಡನೇ ಸಿಲಿಂಡರ್ ಬುಕ್ ಮಾಡಲು ೪೫ ದಿನ ಕಾಯಬೇಕಿತ್ತು. ಈಗ ಆ ಅವಧಿ ೨೦ ದಿನಗಳಷ್ಟು ಕಡಿಮೆಯಾಗಿದೆ.
ತಕ್ಷಣದಿಂದ ಅನುಷ್ಠಾನ: ಈ ನೂತನ ನಿಯಮವನ್ನು ತಕ್ಷಣದಿಂದಲೇ ಅನುಷ್ಠಾನಕ್ಕೆ ತರುವಂತೆ ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳಿಗೆ ಪೆಟ್ರೋಲಿಯಂ ಸಚಿವಾಲಯ ಸೂಚನೆ ನೀಡಿದೆ.
ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕೆ ‘ಕೆಎಸ್ಆರ್ಟಿಸಿ’ ಬಿಗ್ ಆಫರ್: ಬೆಂಗಳೂರಿನಿಂದ 2,400 ಹೆಚ್ಚುವರಿ ವಿಶೇಷ ಬಸ್ಗಳ ಸಂಚಾರ
45 ದಿನಗಳ ಕಾಯುವಿಕೆ ಅವಧಿ ಜಾರಿಗೆ ತಂದಿದ್ದೇಕೆ?:
ಜಾಗತಿಕ ಮಟ್ಟದಲ್ಲಿ ಪೂರೈಕೆ ಸಾಲಿನಲ್ಲಿ ಉಂಟಾಗಿದ್ದ ವ್ಯತ್ಯಯದಿಂದಾಗಿ ಎಲ್ಪಿಜಿ ಅಭಾವ ಉಂಟಾಗಿತ್ತು. ಪೂರೈಕೆಯ ಅಭಾವ ನಿರ್ವಹಣೆಗಾಗಿ ನಗರ ಪ್ರದೇಶಗಳಿಗೆ ೨೫ ದಿನ ಹಾಗೂ ಗ್ರಾಮೀಣ ಭಾಗಕ್ಕೆ ೪೫ ದಿನಗಳ ಕನಿಷ್ಠ ಅಂತರದ ತಾತ್ಕಾಲಿಕ ನಿಯಮ ತರಲಾಗಿತ್ತು.
ಪ್ರಸ್ತುತ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಿತಿಗತಿ ಸುಧಾರಿಸಿದ್ದು, ಕಾಯುವಿಕೆಯ ಪಟ್ಟಿ (Backlog) ಗಣನೀಯವಾಗಿ ತಗ್ಗಿದೆ. ಹೀಗಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಸುರೇಶ್ ಗೋಪಿ ಅವರು ಗ್ರಾಮೀಣ ಭಾಗದ ಜನರಿಗಿದ್ದ ಈ ಕಟ್ಟುನಿಟ್ಟಿನ ನಿಯಮವನ್ನು ಸಡಿಲಗೊಳಿಸುವುದಾಗಿ ಘೋಷಿಸಿದ್ದಾರೆ.

