ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹೩ ಲಕ್ಷ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವುಗೈದಿರುವ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಸಿ.ರೋಡ್ ಬಸ್ ನಿಲ್ದಾಣದ ಹಿಂಭಾಗದ ‘ಅನುಗ್ರಹ’ ಮನೆಯಲ್ಲಿ ವಾಸವಾಗಿರುವ ಶ್ರುತಿ ಪೈ (35) ಎಂಬುವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರುತಿ ಪೈ ಅವರು ತಮ್ಮ ಅತ್ತೆಯೊಂದಿಗೆ ಗೋವಾದ ಮಡಗಾವ್‌ನಲ್ಲಿರುವ ತಾಯಿ ಮನೆಗೆ ತೆರಳಿದ್ದರು. ಸೆಪ್ಟೆಂಬರ್ ೪ ರಂದು ಸಂಜೆ ಮಡಗಾವ್‌ನಿಂದ ಬಂಟ್ವಾಳದ ಮನೆಗೆ ಬಂದು ಬಟ್ಟೆಗಳನ್ನು ತೆಗೆದುಕೊಂಡು, ಮನೆಗೆ ಬೀಗ ಹಾಕಿ ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಅಲ್ಲೇ ಉಳಿದುಕೊಂಡಿದ್ದರು.
ಸೆಪ್ಟೆಂಬರ್ 6 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಂಗಳೂರಿನಿಂದ ಮನೆಗೆ ವಾಪಸಾದಾಗ ಮುಂಭಾಗದ ಬಾಗಿಲು ತೆರೆದಿರುವುದು ಕಂಡುಬಂದಿದೆ. ಒಳಗೆ ಹೋಗಿ ಪರಿಶೀಲಿಸಿದಾಗ ಮೂರು ಕೊಠಡಿಗಳ ಬೀಗಗಳನ್ನು ಮುರಿದು, ಗಾಡ್ರೇಜ್‌ನಲ್ಲಿದ್ದ ಬಟ್ಟೆ ಹಾಗೂ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು.
ಇದನ್ನೂ ಓದಿ: ಬಂಟ್ವಾಳ: ಸೆಪ್ಟೆಂಬರ್ 11ರಿಂದ 14ರವರೆಗೆ ಐತಿಹಾಸಿಕ ಸುಳ್ಳಮಲೆ ಗುಹಾ ತೀರ್ಥ ಸ್ನಾನ
25 ಸಾವಿರ ರೂ., ನವಿಲಿನ ಚಿತ್ರವಿರುವ 2 ಬಿಂಡೋಲೆಗಳು (ಸುಮಾರು 8 ಗ್ರಾಂ, ಮೌಲ್ಯ 96 ಸಾವಿರ ರೂ.) ಹಾಗೂ 8 ಗ್ರಾಂ ತೂಕದ ಹರಿಯಲ್ ಚೈನ್ (ಮೌಲ್ಯ 96 ಸಾವಿರ ರೂ.) ಸುಮಾರು 58 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣ/ವಸ್ತುಗಳು, ಕಳವಾದ ನಗದು ಮತ್ತು ಆಭರಣಗಳ ಒಟ್ಟು ಅಂದಾಜು ಮೌಲ್ಯ 3 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ 331(3), 331(4) ಹಾಗೂ 305 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

