Breaking News

“ಆಡಳಿತ ಪಕ್ಷದ ಸಾಲು ಬೇಡ, ವಿಪಕ್ಷ ಸಾಲಿನಲ್ಲಿ ಸೀಟು ಕೊಡಿ”: ಸ್ಪೀಕರ್‌ಗೆ ಪತ್ರ ಬರೆಯಲು ಶಾಸಕ ಟಿ.ಬಿ. ಜಯಚಂದ್ರ ಸಿದ್ಧತೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್‌ರಚನೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲಿ ಮಂತ್ರಿಸ್ಥಾನ ವಂಚಿತ ಶಾಸಕರ ಅಸಮಾಧಾನ ಮತ್ತು ಬಂಡಾಯ ತಾರಕಕ್ಕೇರಿದೆ. ಪಕ್ಷದ ವರಿಷ್ಠರು ಮನವೊಲಿಸಲು ಯತ್ನಿಸಿದರೂ ಹಲವು ಶಾಸಕರ ಆಕ್ರೋಶ ತಣ್ಣಗಾಗದಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಭಾರಿ ತಲೆನೋವಾಗಿ ಪರಿಣಮಿಸಿದೆ.

ರಾಜ್ಯ ರಾಜಕೀಯದಲ್ಲಾಗುತ್ತಿರುವ ಈ ಅನಿರೀಕ್ಷಿತ ಹಾಗೂ ಕ್ಷಿಪ್ರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ತುರ್ತಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅಸಮಾಧಾನಗೊಂಡಿರುವ ಶಾಸಕರನ್ನು ಖುದ್ದು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಅತಿವೃಷ್ಟಿ-ಬರ ಎದುರಿಸಲು ಸರ್ಕಾರ ‘ಅಲರ್ಟ್’: ಸಚಿವರಿಗೆ ಜಿಲ್ಲಾ ಪ್ರವಾಸ ಮತ್ತು ತುರ್ತು ವರದಿ ಸಲ್ಲಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶ
ವಿಪಕ್ಷ ಸಾಲಿನಲ್ಲಿ ಕುಳಿತುಕೊಳ್ಳಲು ಸಿದ್ಧರಾದ ಶಾಸಕ ಟಿ.ಬಿ. ಜಯಚಂದ್ರ

ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಶಿರಾ ಕ್ಷೇತ್ರದ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷದ ಸದಸ್ಯರ ಸಾಲಿನಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲದೆ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸಾಲಿನಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸುವಂತೆ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆಯಲು ಟಿ.ಬಿ. ಜಯಚಂದ್ರ ಸಿದ್ಧತೆ ಮಾಡಿಕೊಂಡಿದ್ದಾರೆ.

ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಂಡೇ ಸರ್ಕಾರದ ಕಾರ್ಯವೈಖರಿಯನ್ನು ಗಮನಿಸಿ, ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಬಗ್ಗೆ ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನೂತನ ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಬೇಕಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲರು ಸಿಎಂ ಶಿಫಾರಸಿನ ಮೇರೆಗೆ ಟಿ.ಬಿ. ಜಯಚಂದ್ರ ಅವರನ್ನು ‘ಹಂಗಾಮಿ ಸ್ಪೀಕರ್’ (Protem Speaker) ಆಗಿ ನೇಮಿಸಿ ಅಧಿಸೂಚನೆ ಹೊರಡಿಸಿದ್ದರು. ಆದರೆ ತೀವ್ರ ಅಸಮಾಧಾನದಿಂದಿರುವ ಜಯಚಂದ್ರ ಅವರು ಈ ಜವಾಬ್ದಾರಿಯನ್ನೂ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *