ನವದೆಹಲಿ: ಗೂಗಲ್ ಪೇ (Google Pay), ಫೋನ್ ಪೇ (PhonePe) ಹಾಗೂ ಪೇಟಿಎಂ (Paytm) ಮುಂತಾದ ಆಪ್‌ಗಳ ಮೂಲಕ ನಡೆಸಲಾಗುವ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಪ್ರಮುಖ ನೀತಿ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಯುಪಿಐ ವಹಿವಾಟುಗಳ ಮೇಲೆ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಅಥವಾ ವರ್ತಕರ ಶುಲ್ಕವನ್ನು ವಿಧಿಸಲು ಅವಕಾಶ ಕಲ್ಪಿಸುವ ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ (ತಿದ್ದುಪಡಿ) ಮಸೂದೆ’ಯನ್ನು (Payment and Settlement Systems Amendment Bill) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ್ದಾರೆ.
ಏನಿದು ಹೊಸ ಮಸೂದೆ? ಇದರಿಂದ ಯಾರಿಗೆ ಪರಿಣಾಮ?
ವರ್ತಕರ ಶುಲ್ಕ (MDR) ಮರುಜಾರಿ ಸಾಧ್ಯತೆ: 2020 ರ ಜನವರಿಯಿಂದ ರದ್ದುಗೊಳಿಸಲಾಗಿದ್ದ ಯುಪಿಐ ಮೇಲಿನ ವರ್ತಕರ ಶುಲ್ಕವನ್ನು (MDR) ಮರಳಿ ಜಾರಿಗೆ ತರಲು ಬ್ಯಾಂಕ್‌ಗಳಿಗೆ ಹಾಗೂ ಪಾವತಿ ಸೇವಾ ಸಂಸ್ಥೆಗಳಿಗೆ ಕಾನೂನುಬದ್ಧ ಅಧಿಕಾರ ನೀಡಲು ಈ ತಿದ್ದುಪಡಿ ತರಲಾಗುತ್ತಿದೆ.
ಸಾಮಾನ್ಯ ಗ್ರಾಹಕರಿಗೆ ಉಚಿತ ಯುಪಿಐ ಸೇವೆ ಮುಂದುವರಿಕೆ: ಸಾರ್ವಜನಿಕರು ಅಥವಾ ಸಾಮಾನ್ಯ ಗ್ರಾಹಕರು ಡಿಜಿಟಲ್ ಪಾವತಿ ಮಾಡುವುದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಈ ಶುಲ್ಕವು ಕೇವಲ ದೊಡ್ಡ ಮಟ್ಟದ ವ್ಯಾಪಾರಿಗಳಿಗೆ ಮಾತ್ರ ಅನ್ವಯವಾಗಲಿದೆ.
2,000 ಗಿಂತ ಹೆಚ್ಚಿನ ಮೌಲ್ಯದ ವಹಿವಾಟು: ವಾರ್ಷಿಕ 1.5 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ದೊಡ್ಡ ವ್ಯಾಪಾರಿಗಳಿಗೆ ಸಾರ್ವಜನಿಕರು ಮಾಡುವ ₹2,000 ಕ್ಕಿಂತ ಹೆಚ್ಚಿನ ಮೌಲ್ಯದ ಪಾವತಿಗಳ ಮೇಲೆ ಶೇಕಡಾ 0.3 ರಿಂದ 0.5 ರಷ್ಟು ಎಂಡಿಆರ್ (MDR) ವಿಧಿಸುವ ಪ್ರಸ್ತಾಪ ಪರಿಶೀಲನೆಯಲ್ಲಿದೆ.
ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ: ಬೀದಿ ಬದಿ ವ್ಯಾಪಾರಿಗಳು ಹಾಗೂ 1.5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ಸಣ್ಣ ಅಂಗಡಿಕಾರರು ಈ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಪಡೆಯಲಿದ್ದಾರೆ.
ಪ್ರಸ್ತಾಪಿತ ತಿದ್ದುಪಡಿಗೆ ಕಾರಣವೇನು?:
ಪ್ರಸ್ತುತ ಶೂನ್ಯ-ಶುಲ್ಕ (Zero-MDR) ನೀತಿಯಿಂದಾಗಿ ಬ್ಯಾಂಕ್‌ಗಳು ಹಾಗೂ ಪೇಟಿಎಂ, ಫೋನ್ ಪೇನಂತಹ ಪಾವತಿ ಸೇವಾ ಪ್ಲಾಟ್‌ಫಾರ್ಮ್‌ಗಳಿಗೆ ಯುಪಿಐ ಮೂಲಸೌಕರ್ಯ ನಿರ್ವಹಣೆ ಮತ್ತು ಸೈಬರ್ ಭದ್ರತೆ ಒದಗಿಸಲು ಭಾರಿ ವೆಚ್ಚವಾಗುತ್ತಿದೆ. ಈ ತಿದ್ದುಪಡಿಯಿಂದಾಗಿ ಪಾವತಿ ಸೇವಾ ಪ್ಲಾಟ್‌ಫಾರ್ಮ್‌ಗಳಿಗೆ ವಾರ್ಷಿಕ 5,000 ದಿಂದ 10,000 ರೂಪಾಯಿ ಕೋಟಿಯಷ್ಟು ಆದಾಯ ಸೃಷ್ಟಿಯಾಗಲಿದ್ದು, ಡಿಜಿಟಲ್ ಮೂಲಸೌಕರ್ಯ ಬಲಪಡಿಸಲು ನೆರವಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

