ಬೆಂಗಳೂರು: ದೇಶದ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳು ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮೇಲೆ ನಡೆದ ಬಲಪ್ರಯೋಗವನ್ನು ಮುಚ್ಚಿಹಾಕಲು, ಕರ್ನಾಟಕದ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ನಕಲಿ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೆ, ಈ ವೇಳೆ ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರ ಆರೋಪಗಳಿಗೆ ಕಟುವಾಗಿ ತಿರುಗೇಟು ನೀಡಿರುವ ಅವರು, “ಅಶೋಕ್ ಅವರ ಕಲ್ಪನಾ ಶಕ್ತಿಗೆ ನೊಬೆಲ್ ಪ್ರಶಸ್ತಿಯನ್ನೇ ನೀಡಬೇಕು” ಎಂದು ವ್ಯಂಗ್ಯವಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು ದೆಹಲಿಯಲ್ಲಿ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟವನ್ನು ಅತ್ಯಂತ ಅಮಾನುಷವಾಗಿ ಹತ್ತಿಕ್ಕಲಾಗಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ರಾಹುಲ್ ಗಾಂಧಿ ಅವರ ಮೇಲೆಯೂ ಬಲಪ್ರಯೋಗ ನಡೆಸಿರುವುದು ಬಿಜೆಪಿಯ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ದೇಶದ ರಾಜಧಾನಿಯನ್ನೇ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣಕ್ಕೆ ತಳ್ಳಿರುವ ಬಿಜೆಪಿಯ ಕೇಂದ್ರ ಸರ್ಕಾರದ ವಿರುದ್ಧ ಜನರು ಛೀಮಾರಿ ಹಾಕುತ್ತಿರುವಾಗ, ಕರ್ನಾಟಕದ ಬಿಜೆಪಿ ನಾಯಕರು ವಿಷಯಾಂತರಕ್ಕಾಗಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಬಂದಿರುವುದು ನಾಚಿಕೆಗೇಡು. ದೇಶದ ವಿದ್ಯಾರ್ಥಿಗಳ ರಕ್ತದ ಕಲೆಗಳನ್ನು ಮುಚ್ಚಿಹಾಕಲು ಬೆಂಗಳೂರಿನಲ್ಲಿ… pic.twitter.com/Chn62IxPgb
— Hariprasad.B.K. (@HariprasadBK2) July 22, 2026
ಪೊಲೀಸರು ಹಾಗೂ ಪೊಲೀಸ್ ವೇಷಧಾರಿಗಳಾದ ಸಂಘಪರಿವಾರ ಮತ್ತು ಬಿಜೆಪಿಯ ಕಾರ್ಯಕರ್ತರು ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆಸಿರುವ ಅನುಚಿತ ವರ್ತನೆಯ ದೃಶ್ಯಗಳು ದೇಶದ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿವೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ಲಾಠಿಯಿಂದ ಹತ್ತಿಕ್ಕಿ, ಬೆಂಗಳೂರಿನಲ್ಲಿ ಬಂದು ಪ್ರಜಾಪ್ರಭುತ್ವದ ಪಾಠ ಹೇಳಲು ಕಾಂಗ್ರೆಸ್ ಕಚೇರಿಗೆ ಬರುವುದು ಬಿಜೆಪಿಯ ಹಾಸ್ಯಾಸ್ಪದ ದ್ವಂದ್ವ ನೀತಿಯಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹೈಡ್ರಾಮಾ: ತೃಣಮೂಲ ಕಾಂಗ್ರೆಸ್ ಶಾಸಕ ಅಮಾನತು
‘ಆರ್. ಅಶೋಕ್ ಅವರ ಕಲ್ಪನಾ ಶಕ್ತಿಗೆ ನೊಬೆಲ್ ಪ್ರಶಸ್ತಿ ಸಿಗಬೇಕು
ಕಾಂಗ್ರೆಸ್ ಕಚೇರಿಯ ಮೇಲೆ ಮುತ್ತಿಗೆ ಹಾಕಲು ಬಂದ ಬಿಜೆಪಿ ನಾಯಕರ ನಡೆಯನ್ನು ಖಂಡಿಸಿರುವ ಹರಿಪ್ರಸಾದ್ ಅವರು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಸ್ಥಾನದ ಘನತೆಯನ್ನು ಮರೆತು ಪುಡಿ ನಾಯಕನಂತೆ ಮಾತನಾಡಿದ್ದಾರೆ. ಕಾಂಗ್ರೆಸ್ ಕಚೇರಿ ಮೇಲೆ ದಾಳಿ ಮಾಡುವ ಉದ್ದೇಶದಿಂದ ಗುಂಪು ಕರೆದುಕೊಂಡು ಬಂದವರು, ಈಗ ನಮ್ಮ ಬಳಿ ‘ಮಚ್ಚು, ಲಾಂಗ್, ದೊಣ್ಣೆ’ಗಳಿದ್ದವು ಎಂದು ಪೇಲವ ಆರೋಪ ಮಾಡುತ್ತಿದ್ದಾರೆ. ನಿಜಕ್ಕೂ ಆರ್. ಅಶೋಕ್ ಅವರ ಈ ಕಲ್ಪನಾ ಶಕ್ತಿಗೆ ‘ನೊಬೆಲ್ ಪ್ರಶಸ್ತಿ’ಗೆ ಶಿಫಾರಸು ಮಾಡಬೇಕು.” ಎಂದು ಹೇಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

