ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತಾದ ವಿವಾದಾತ್ಮಕ ಪ್ರಕರಣಕ್ಕೆ (ಬುರುಡೆ/ಮಾಸ್ಟರ್ಮೈಂಡ್ ಆರೋಪ) ತಮ್ಮ ಹೆಸರು ನಂಟಿಟ್ಟು ಆಧಾರರಹಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಮಾಜಿ ಐಎಎಸ್ ಅಧಿಕಾರಿ ಹಾಗೂ ಪ್ರಸ್ತುತ ತಮಿಳುನಾಡಿನ ಸಂಸದ ಸಸಿಕಾಂತ್ ಸೆಂಥಿಲ್ ಅವರು ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Criminal Defamation Case) ದಾಖಲಿಸಿದ್ದಾರೆ.
ಸಸಿಕಾಂತ್ ಸೆಂಥಿಲ್ ಅವರು ಸಲ್ಲಿಸಿದ ಖಾಸಗಿ ದೂರನ್ನು ಪರಿಶೀಲಿಸಿದ ಬೆಂಗಳೂರಿನ 42ನೇ ಎಸಿಜೆಎಂ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ), ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಆಗಸ್ಟ್ 24ರಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ವಿವಾದಗಳ ಹಿಂದೆ ಸಸಿಕಾಂತ್ ಸೆಂಥಿಲ್ ಅವರೇ ‘ಮಾಸ್ಟರ್ ಮೈಂಡ್’ ಮತ್ತು ಅವರು ‘ಹಿಂದೂ ವಿರೋಧಿ’ ಎಂದು ಜನಾರ್ದನ ರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ಆರೋಪಗಳನ್ನು ಕಟುವಾಗಿ ನಿರಾಕರಿಸಿದ್ದ ಸೆಂಥಿಲ್, “ನನಗೆ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರೆಡ್ಡಿಯವರ ಅಕ್ರಮಗಳ ತನಿಖೆಗೆ ನೆರವಾಗಿದ್ದೆ, ಆ ದ್ವೇಷದಿಂದ ನನ್ನ ತೇಜೋವಧೆ ಮಾಡಲು ಈ ರೀತಿ ಆಧಾರರಹಿತ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ವಾದಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಶೂಟೌಟ್: ಕಾಡುಹಂದಿ ಬೇಟೆಗಾರನ ಕಾಲಿಗೆ ಗುಂಡಿಕ್ಕಿದ ಅರಣ್ಯ ಸಿಬ್ಬಂದಿ
ಸೆಂಥಿಲ್ ಅವರ ಖಾಸಗಿ ದೂರನ್ನು ಸ್ವೀಕರಿಸಿದ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಿ, ಆಧಾರರಹಿತ ಹೇಳಿಕೆಗಳಿಂದ ತೇಜೋವಧೆಯಾಗಿದೆ ಎಂಬ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿ ಜನಾರ್ದನ ರೆಡ್ಡಿಗೆ ಆಗಸ್ಟ್ ೨೪ಕ್ಕೆ ಹಾಜರಾಗಲು ಸಮನ್ಸ್ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

