ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ವ್ಯಾಪ್ತಿಯಲ್ಲಿ ಕಾಡುಹಂದಿ ಬೇಟೆಯಾಡಿ ಸಾಗಿಸುತ್ತಿದ್ದ ಬೇಟೆಗಾರರ ತಂಡ ಹಾಗೂ ಅರಣ್ಯ ಸಿಬ್ಬಂದಿ ನಡುವೆ ಭಾರಿ ಫೈರಿಂಗ್ (Shootout) ನಡೆದಿದೆ. ಬೀಟ್ ಫಾರೆಸ್ಟರ್ ಮೇಲೆ ದಾಳಿ ನಡೆಸಿದ ಬೇಟೆಗಾರನ ಕಾಲಿಗೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಈ ರೋಚಕ ಕಾರ್ಯಾಚರಣೆ ನಡೆದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಾಥೇರಿ ಗ್ರಾಮದ ಅನ್ವಿತ್ ಹಾಗೂ ಆತನ ಸಹಚರರಾದ ದರ್ಶನ್, ಮಂಜು ಮತ್ತು ಕಿರಣ್ ಎಂಬುವವರು ಎರಡು ಕಾಡುಹಂದಿಗಳನ್ನು ಬೇಟೆಯಾಡಿ ಆಲ್ಟೋ ಕಾರಿನಲ್ಲಿ ಸಾಗಿಸುತ್ತಿದ್ದರು.
ಇದನ್ನು ಗಮನಿಸಿದ ಬೀಟ್ ಫಾರೆಸ್ಟರ್ ಧರ್ಮರಾಜ್ ನೇತೃತ್ವದ ಅರಣ್ಯ ಸಿಬ್ಬಂದಿ ತಂಡ, ಏರ್ ಫೈರಿಂಗ್ ಮಾಡುವ ಮೂಲಕ ಶರಣಾಗುವಂತೆ ಆರೋಪಿಗಳಿಗೆ ವಾರ್ನಿಂಗ್ ನೀಡಿದ್ದರು. ಶರಣಾಗುವ ಬದಲು ಬೇಟೆಗಾರ ಅನ್ವಿತ್ ತನ್ನಲ್ಲಿದ್ದ ನಾಡಕೋವಿಯಿಂದ ಫಾರೆಸ್ಟರ್ ಧರ್ಮರಾಜ್ ಅವರ ಮೇಲೆಯೇ ಓಪನ್ ಫೈರಿಂಗ್ ನಡೆಸಿದ್ದಾನೆ. ಕೋವಿಯಿಂದ ಸಿಡಿದ ಮದ್ದಿನ ಚೂರುಗಳು ತಾಗಿ ಫಾರೆಸ್ಟರ್ ಧರ್ಮರಾಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಬೀದರ್ BRIMS ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಬೈಕ್ ನುಗ್ಗಿಸಿದ ಕಿಡಿಗೇಡಿಗಳು
ತಕ್ಷಣವೇ ಕಾರ್ಯಪ್ರವೃತ್ತರಾದ ಫಾರೆಸ್ಟರ್ ಧರ್ಮರಾಜ್ ತಮ್ಮ ಆಕ್ಷನ್ ಗನ್ ಮೂಲಕ ಕೌಂಟರ್ ಫೈರಿಂಗ್ ಮಾಡಿದ್ದಾರೆ. ಧರ್ಮರಾಜ್ ಹಾರಿಸಿದ ಗುಂಡು ಅನ್ವಿತ್ ಕಾಲಿಗೆ ತಾಗಿ ಆತ ಗಾಯಗೊಂಡು ಸ್ಥಳದಲ್ಲೇ ಬಿದ್ದಿದ್ದಾನೆ. ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸುತ್ತಿದ್ದಂತೆ ಭಯಬಿದ್ದ ಇತರ ಆರೋಪಿಗಳಾದ ದರ್ಶನ್, ಮಂಜು ಹಾಗೂ ಕಿರಣ್, ಗಾಯಗೊಂಡಿದ್ದ ಅನ್ವಿತ್‌ನನ್ನು ಸ್ಥಳದಲ್ಲೇ ಬಿಟ್ಟು ಕಾಡಿನೊಳಗೆ ಓಡಿ ಪರಾರಿಯಾಗಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

