ಪ್ರೇಯಸಿ ಜೊತೆ ಜಗಳ: ಮೊದಲ ಮಹಡಿಯಿಂದ ಚರಂಡಿಗೆ ಕಾರಿನ ಕೀ ಎಸೆದ ಯುವತಿ, ಪ್ರಿಯಕರ ಅಸಹಾಯಕ

ಕಡಬ : ಸಣ್ಣ ವಿಚಾರಕ್ಕೆ ಪ್ರೇಮಿಗಳಿಬ್ಬರ ನಡುವೆ ಉಂಟಾದ ಜಗಳ ಕೊನೆಗೆ ಕಾರಿನ ಕೀಲಿ ಕೈಯನ್ನು ಚರಂಡಿಗೆ ಎಸೆಯುವ ಹಂತಕ್ಕೆ ತಲುಪಿ, ಪ್ರಿಯಕರ ಗಂಟೆಗಟ್ಟಲೆ ಚರಂಡಿಯಲ್ಲಿ ಕೀ ಹುಡುಕಾಡುವ ವಿಚಿತ್ರ ಘಟನೆ ಕಡಬದ ಸಂತೇಕಟ್ಟೆ ಬಳಿ ನಡೆದಿದೆ.

ಈ ವಿಚಿತ್ರ ಘಟನೆಯ ವಿಡಿಯೋ ಹಾಗೂ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮತ್ತು ನಗುವಿಗೆ ಕಾರಣವಾಗಿದೆ.

ಕಚೇರಿಯ ಮೊದಲ ಮಹಡಿಯಲ್ಲಿ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ಆಕ್ರೋಶಗೊಂಡ ಯುವತಿ ಯುವಕನ ಕೈಯಲ್ಲಿದ್ದ ಕಾರಿನ ಕೀಲಿಯನ್ನು ಕಸಿದುಕೊಂಡು ಮೊದಲ ಮಹಡಿಯಿಂದ ಕೆಳಗಿದ್ದ ಚರಂಡಿಗೆ ಎಸೆದಿದ್ದಾಳೆ.

ಪ್ರೇಯಸಿ ಎಸೆದ ಕೀಲಿ ಕೈ ಗಲೀಜು ನೀರು ಹಾಗೂ ಕೆಸರಿನಿಂದ ಕೂಡಿದ್ದ ಚರಂಡಿಯೊಳಗೆ ಬಿದ್ದು ಕಾಣೆಯಾಗಿದೆ. ಕಾರನ್ನು ಅಲ್ಲಿಂದ ತೆಗೆಯಲಾಗದೆ ಯುವಕ ಕೆಸರು ತುಂಬಿದ ಚರಂಡಿಗೆ ಇಳಿದು ಕೀ ಹುಡುಕಲು ಪ್ರಾರಂಭಿಸಿದ್ದಾನೆ.

ಇದನ್ನೂ ಓದಿ: ಬೀದರ್ BRIMS ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಬೈಕ್ ನುಗ್ಗಿಸಿದ ಕಿಡಿಗೇಡಿಗಳು

ಜನದಟ್ಟಣೆ ಇರುವ ಪ್ರದೇಶದಲ್ಲಿ ಯುವಕನೊಬ್ಬ ಚರಂಡಿಯೊಳಗೆ ಏನನ್ನೋ ಹುಡುಕುತ್ತಿರುವುದನ್ನು ಕಂಡ ಹಾದಿಹೋಕರು ಹಾಗೂ ಸ್ಥಳೀಯರು ಆತನಿಗೆ ನೆರವಾಗಲು ಮುಂದಾದರು. ಸ್ಥಳೀಯರು ಚರಂಡಿ ಸುತ್ತ ಬೆಳೆದಿದ್ದ ಪೊದೆ ಹಾಗೂ ಗಿಡಗಂಟಿಗಳನ್ನು ಕತ್ತರಿಸಿ, ಸಂಜೆ 7.30ರವರೆಗೆ ಸತತ 4 ಗಂಟೆಗಳ ಕಾಲ ಕೀಗಾಗಿ ಹುಡುಕಾಟ ನಡೆಸಿದರು. ಎಷ್ಟೇ ಹುಡುಕಿದರೂ ಕೆಸರಿನಲ್ಲಿ ಕೀ ಸಿಗದ ಹಿನ್ನೆಲೆಯಲ್ಲಿ, ಬೇರೆ ದಾರಿ ಇಲ್ಲದೆ ಯುವಕ ಕಾರನ್ನು ರಸ್ತೆ ಬದಿಯಲ್ಲೇ ಬಿಟ್ಟು ಆಟೋ ರಿಕ್ಷಾ ಹಿಡಿದು ತನ್ನ ಮನೆಗೆ ಹಿಂತಿರುಗಿದ್ದಾನೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *