Breaking News

ಮಳೆ ರಜೆ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಜೈಲು ಶಿಕ್ಷೆ: ಜಿಲ್ಲಾಡಳಿತದ ಕಠಿಣ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ.3ರಂದು ಶಾಲೆಗಳಿಗೆ ರಜೆ ಘೋಷಿಸುವ ಮುನ್ನವೇ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ “ನಾಳೆ ಶಾಲೆಗಳಿಗೆ ರಜೆ” ಎಂಬ ನಕಲಿ ಸಂದೇಶ ಹಾಗೂ ಆದೇಶ ಪತ್ರಗಳನ್ನು ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲಾಡಳಿತದಿಂದ ಅಧಿಕೃತ ಆದೇಶ ಹೊರಬೀಳುವ ಮುನ್ನವೇ ರಜೆ ಘೋಷಣೆಯ ಹೆಸರಿನಲ್ಲಿ ಸುಳ್ಳು ಮಾಹಿತಿ ಹಾಗೂ ನಕಲಿ ಆದೇಶಗಳನ್ನು ಪ್ರಸಾರ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.

ಇದನ್ನೂ ಓದಿ: ಭಾರೀ ಮಳೆ: ಆ.3ರಂದು ದಕ್ಷಿಣ ಕನ್ನಡ ಜಿಲ್ಲೆಯ‌ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಾರ್ವಜನಿಕರು ಇಂತಹ ಸಂದೇಶಗಳನ್ನು ನಂಬದೇ, ಜಿಲ್ಲಾಡಳಿತದ ಅಧಿಕೃತ ಪ್ರಕಟಣೆಗಳನ್ನಷ್ಟೇ ಪರಿಗಣಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಒಂದು ವರ್ಷದವರೆಗೆ ಜೈಲು ಶಿಕ್ಷೆ ಸಾಧ್ಯ

ವಿಪತ್ತು, ಮಳೆ ರಜೆ ಅಥವಾ ತುರ್ತು ಪರಿಸ್ಥಿತಿಗಳ ಕುರಿತು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಡುವುದು ಅಥವಾ ಭಯಭೀತಿಯನ್ನು ಉಂಟುಮಾಡುವಂತಹ ನಕಲಿ ಸಂದೇಶಗಳನ್ನು ಪ್ರಸಾರ ಮಾಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್ 54ರ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ತಪ್ಪಿತಸ್ಥರೆಂದು ಸಾಬೀತಾದಲ್ಲಿ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ.

ಜಿಲ್ಲಾಡಳಿತವು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ಸಂದೇಶಗಳನ್ನು ಹಂಚಿಕೊಳ್ಳದಂತೆ ಮನವಿ ಮಾಡಿದೆ.

ಜಿಲ್ಲಾಡಳಿತದ ಅಧಿಕೃತ ಪ್ರಕಟಣೆ ಹೊರಬರುವ ಮುನ್ನವೇ ಮಳೆ ಹಿನ್ನೆಲೆ ಆ.3ರಂದು ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ ಎಂಬ ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಇದು ಜನರಲ್ಲಿ ಗೊಂದಲ ಸೃಷ್ಟಿಸಿತ್ತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *