ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಸಮೀಪದ ದೊಡ್ಡ ಕೆರೆಯಲ್ಲಿ ಅನೇಕ ಮೀನುಗಳು ಸತ್ತು ತೇಲುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೆರೆಯಲ್ಲಿ ಮೀನುಗಾರಿಕೆ ಹಕ್ಕನ್ನು ಹರಾಜಿನಲ್ಲಿ ಪಡೆದುಕೊಂಡಿದ್ದ ವ್ಯಾಪಾರಿ ರಿಯಾದ್ ಅವರು ಈ ಘಟನೆಗೆ ಸಂಬಂಧಿಸಿ ಸ್ಥಳೀಯ ಗ್ರಾಮ ಪಂಚಾಯತ್ಗೆ ದೂರು ನೀಡಿದ್ದಾರೆ.
ಗ್ರಾಮ ಪಂಚಾಯತ್ ಆಡಳಿತದಡಿ ಈ ಕೆರೆಯಲ್ಲಿ ಮೀನುಗಾರಿಕೆ ನಡೆಯುತ್ತಿದ್ದು, ರಿಯಾದ್ ಅವರು ಮೂರು ವರ್ಷಗಳ ಅವಧಿಗೆ ರೂ. 6 ಲಕ್ಷಕ್ಕೆ ಹಕ್ಕು ಪಡೆದಿದ್ದರು. ಮಂಗಳವಾರ ಮೀನು ಹಿಡಿಯಲು ಕೆರೆಗೆ ತೆರಳಿದಾಗ ಹಲವಾರು ಮೀನುಗಳು ಸತ್ತು ತೇಲುತ್ತಿರುವುದನ್ನು ಅವರು ಗಮನಿಸಿದ್ದಾರೆ.

ಈ ಘಟನೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಇದರಿಂದಾಗಿ ತಮಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡುವಂತೆ ಹಾಗೂ ಘಟನೆಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಿಯಾದ್ ಅವರು ಲಿಖಿತ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: 2 ಕೋಟಿ ಭೂಮಿಗಾಗಿ ಉದ್ಯಮಿಯ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ
ಘಟನೆಯ ಮಾಹಿತಿ ತಿಳಿದ ನಂತರ ತಹಶೀಲ್ದಾರ್ ಪೃಥ್ವಿ ಸಣಿಕಂ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮಹೇಶ್ವರಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್, “ಕೆರೆಯಲ್ಲಿ ಮಾಲಿನ್ಯ ಇರುವ ಶಂಕೆ ವ್ಯಕ್ತವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೂ ಮಾಹಿತಿ ನೀಡಲಾಗಿದೆ. ವರದಿ ಬಂದ ನಂತರವೇ ಮೀನುಗಳ ಸಾವುಗಳಿಗೆ ನಿಖರ ಕಾರಣ ತಿಳಿಯಲಿದೆ” ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

