ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ದೀನ ದಯಾಳ್ ಉಪಾಧ್ಯಾಯ ಗ್ರಾಮ ಅಭಿವೃದ್ಧಿ ಪ್ರಶಸ್ತಿಗೆ ರಾಜ್ಯದ ಆರು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಐದು ಉಡುಪಿ ಜಿಲ್ಲೆಯದ್ದಾಗಿರುವುದು ವಿಶೇಷವಾಗಿದೆ.
ಹೆಬ್ರಿ ತಾಲೂಕಿನ ಮುಡ್ರಾಡಿ ಮತ್ತು ಮಡಮಕ್ಕಿ, ಕುಂದಾಪುರ ತಾಲೂಕಿನ ವಂಡ್ಸೆ ಮತ್ತು ಹಕ್ಲಾಡಿ, ಕಾರ್ಕಳ ತಾಲೂಕಿನ ಸನೂರು ಗ್ರಾಮ ಪಂಚಾಯಿತಿಗಳು ಪ್ರಶಸ್ತಿಗೆ ಭಾಜನವಾಗಿವೆ. ಜೊತೆಗೆ ಬೆಂಗಳೂರು ಜಿಲ್ಲೆಯ ಹಲ್ನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕೂಡ ಆಯ್ಕೆಯಾಗಿದೆ. ಆಯ್ಕೆಯಾದ ಪ್ರತಿಯೊಂದು ಪಂಚಾಯಿತಿಗೆ ರೂ.75 ಲಕ್ಷದಿಂದ ರೂ.1.50 ಕೋಟಿ ವರೆಗೆ ನಗದು ಬಹುಮಾನ ದೊರೆಯಲಿದೆ.

ಮುಡ್ರಾಡಿ ಗ್ರಾಮ ಪಂಚಾಯಿತಿ “ದರಿದ್ರತೆಯಿಲ್ಲದ ಮತ್ತು ಜೀವನೋಪಾಯ ಅಭಿವೃದ್ಧಿ ಪಂಚಾಯಿತಿ” ಪ್ರಶಸ್ತಿಗೆ ಆಯ್ಕೆಯಾಗಿದೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸ್ವ ಉದ್ಯೋಗ ಪ್ರೋತ್ಸಾಹ, ಆಧುನಿಕ ಕೃಷಿ ಯಂತ್ರೋಪಕರಣಗಳ ಬಳಕೆ, ಕೇಂದ್ರ ಮತ್ತು ರಾಜ್ಯದ ಸ್ವ ಉದ್ಯೋಗ ಯೋಜನೆಗಳ ಪರಿಣಾಮಕಾರಿ ಜಾರಿ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಮತ್ತು ಶೇ.100 ರೇಷನ್ ವಿತರಣೆಯ ಸಾಧನೆ ಈ ಆಯ್ಕೆಗೆ ಕಾರಣವಾಗಿದೆ.
ಮಡಮಕ್ಕಿ ಗ್ರಾಮ ಪಂಚಾಯಿತಿ “ಸ್ಥಿರ ಕುಡಿಯುವ ನೀರಿನ ಯೋಜನೆ” ಪ್ರಶಸ್ತಿಗೆ ಆಯ್ಕೆಯಾಗಿದೆ. ತಮ್ಮ ವ್ಯಾಪ್ತಿಯಲ್ಲಿನ ನೀರಿನ ಮೂಲಗಳ ಸಂರಕ್ಷಣೆ ಹಾಗೂ ಪ್ರತೀ ಮನೆಗೆ ಸಮರ್ಪಕ ನೀರು ಪೂರೈಕೆ ಮಾಡುವಲ್ಲಿ ಕೈಗೊಂಡ ಕ್ರಮಗಳು ಈ ಗೌರವಕ್ಕೆ ಕಾರಣವಾಗಿವೆ.

ವಂಡ್ಸೆ ಗ್ರಾಮ ಪಂಚಾಯಿತಿ “ಆರೋಗ್ಯ ಸೇವಾ ಪ್ರಶಸ್ತಿ”ಗೆ ಆಯ್ಕೆಯಾಗಿದೆ. ಆರೋಗ್ಯ ಕೇಂದ್ರದ ಸೇವೆಗಳು, ಘನ ತ್ಯಾಜ್ಯ ನಿರ್ವಹಣೆ, ಶಾಲೆ-ಅಂಗನವಾಡಿಗಳಲ್ಲಿ ಆರೋಗ್ಯ ಚಟುವಟಿಕೆಗಳು, ವಿಶೇಷ ಆರೋಗ್ಯ ಶಿಬಿರಗಳು ಹಾಗೂ ನೀರಾಮಯ ಸೊಸೈಟಿ ಮೂಲಕ ಹಾಸಿಗೆ ಹಿಡಿದ ರೋಗಿಗಳಿಗೆ ಪ್ಯಾಲಿಯೇಟಿವ್ ಕೇರ್ ವ್ಯವಸ್ಥೆ ಪ್ರಮುಖ ಕಾರಣಗಳಾಗಿವೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಬೆಲೆ ಏರಿಕೆ ಶಾಕ್: ಇಂದಿನಿಂದ ನೀರಿನ ದರ ಶೇ. 3ರಷ್ಟು ಹೆಚ್ಚಳ; ನಿಮ್ಮ ಬಿಲ್ ಎಷ್ಟು ಬರಲಿದೆ?

ಹಕ್ಲಾಡಿ ಗ್ರಾಮ ಪಂಚಾಯಿತಿ “ಸಾಮಾಜಿಕ ನ್ಯಾಯ ಮತ್ತು ಭದ್ರತಾ ಪಂಚಾಯಿತಿ” ಪ್ರಶಸ್ತಿಗೆ ಭಾಜನವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡವರು, ಅಂಗವಿಕಲರು ಸೇರಿದಂತೆ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಸರ್ಕಾರದ ಅನುದಾನಗಳ ಸಮರ್ಪಕ ಬಳಕೆ, ಉದ್ಯೋಗ ಖಾತ್ರಿ ಯೋಜನೆಗಳ ಪರಿಣಾಮಕಾರಿ ಜಾರಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಶೇ.80ಕ್ಕೂ ಅಧಿಕ ಸಾಧನೆ ಗಮನಾರ್ಹವಾಗಿದೆ.
ಸನೂರು ಗ್ರಾಮ ಪಂಚಾಯಿತಿ “ಮೂಲಸೌಕರ್ಯ ಕ್ಷೇತ್ರ ಪ್ರಶಸ್ತಿ”ಗೆ ಆಯ್ಕೆಯಾಗಿದೆ. ಗ್ರಾಮದಲ್ಲಿ ಸಂಪೂರ್ಣ ಬೀದಿ ದೀಪಗಳ ಅಳವಡಿಕೆ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ಹಾಗೂ ಸ್ಥಳೀಯ ಉದ್ಯೋಗ ಸೃಷ್ಟಿಗೆ ಒತ್ತು ನೀಡಿರುವುದು ಈ ಸಾಧನೆಗೆ ಕಾರಣವಾಗಿದೆ.
ಒಟ್ಟಿನಲ್ಲಿ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿಸಿ ರಾಜ್ಯಕ್ಕೆ ಕೀರ್ತಿ ತಂದಿರುವುದು ಗಮನಾರ್ಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

