ನಾಲ್ಕು ಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 9 ಮಂದಿ ಸಜೀವ ದಹನ!

delhi vivek vihar fire 9 dead residential building

ನವದೆಹಲಿ: ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಗು ಸೇರಿ ಒಂಬತ್ತು ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವೇಕ್ ವಿಹಾರ್ ಫೇಸ್-1ರಲ್ಲಿ ಇರುವ ನಾಲ್ಕು ಮಹಡಿ ನಿವಾಸಿ ಕಟ್ಟಡದಲ್ಲಿ ಬೆಳಗ್ಗೆ ಸುಮಾರು 3:48ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಪೊಲೀಸ್, ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.

Advertisement

ಬೆಂಕಿ ಎರಡನೇ, ಮೂರನೇ ಮತ್ತು ನಾಲ್ಕನೇ ಮಹಡಿಗಳ ಫ್ಲ್ಯಾಟ್‌ಗಳನ್ನು ಆವರಿಸಿಕೊಂಡಿದ್ದು, ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ದೆಹಲಿ ಅಗ್ನಿಶಾಮಕ ದಳದ ಮಾಹಿತಿ ಪ್ರಕಾರ, ವಿವಿಧ ಮಹಡಿಗಳಿಲ್ಲಿ ಸುಟ್ಟುಹೋಗಿದ್ದ ಒಟ್ಟು ಒಂಬತ್ತು ಮಂದಿಯ ಶವಗಳನ್ನು ಪತ್ತೆ ಮಾಡಲಾಗಿದೆ. ಮೊದಲ ಮಹಡಿಯಿಂದ ಒಂದು ಶವ, ಎರಡನೇ ಮಹಡಿಯಿಂದ ಐದು ಶವಗಳು ಹಾಗೂ ಲಾಕ್ ಆಗಿದ್ದ ಮೆಟ್ಟಿಲಿನ ಭಾಗದಿಂದ ಮೂರು ಶವಗಳನ್ನು ಪತ್ತೆ ಮಾಡಲಾಗಿದೆ.

Advertisement

ಇದನ್ನೂ ಓದಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಅಗ್ನಿ ಅವಘಡ: ಆಳದಂಗಡಿ ಭಾಗದಲ್ಲಿ ಧಗಧಗ

ಎರಡನೇ ಮಹಡಿಯಲ್ಲಿ ಮೃತಪಟ್ಟವರನ್ನು ಅರವಿಂದ್ ಜೈನ್, ಅವರ ಪತ್ನಿ ಅನಿತಾ ಜೈನ್, ಪುತ್ರ ನಿಶಾಂತ್ ಜೈನ್, ಸೊಸೆ ಅಂಚಲ್ ಜೈನ್ ಹಾಗೂ ಮೊಮ್ಮಗ ಆಕಾಶ್ ಜೈನ್ ಎಂದು ಗುರುತಿಸಲಾಗಿದೆ. ಮೂರನೇ ಮಹಡಿಯಲ್ಲಿ ನಿತಿನ್ ಜೈನ್, ಪತ್ನಿ ಶೈಲಿ ಜೈನ್ ಮತ್ತು ಪುತ್ರ ಸಮ್ಯಕ್ ಜೈನ್ ಮೃತಪಟ್ಟಿದ್ದಾರೆ.

ಮೊದಲ ಮಹಡಿಯಲ್ಲಿ ಶಿಖಾ ಜೈನ್ ಎಂಬ ಮಹಿಳೆ ಮೃತಳಾಗಿದ್ದು, ಅವರ ಪತಿ ನವೀನ್ ಜೈನ್ ಗಾಯಗೊಂಡಿದ್ದಾರೆ.

ಅಗ್ನಿ ಅವಘಡದ ವೇಳೆ 10ರಿಂದ 15 ಮಂದಿಯನ್ನು ರಕ್ಷಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಇಬ್ಬರನ್ನು ಗುರು ತೇಗ್ ಬಹಾದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 12 ಅಗ್ನಿಶಾಮಕ ವಾಹನಗಳನ್ನು ಬಳಸಿಕೊಂಡು ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ, ಟ್ರಾಫಿಕ್ ಪೊಲೀಸ್ ಹಾಗೂ ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಘಟನೆಯ ನಿಖರ ಕಾರಣ ಪತ್ತೆ ಮಾಡಲು ತನಿಖೆ ಮುಂದುವರಿದಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು