ದ.ಕ. ರೈತರಿಗೆ ಗನ್ ಲೈಸನ್ಸ್ ನವೀಕರಣ ಕಂಟಕ; ತುರ್ತು ಕ್ರಮಕ್ಕೆ ಡಿಜಿಪಿಗೆ ಸಂಸದ ಚೌಟ ಪತ್ರ

DK-mp-brijesh-chowta-letter-on-gun-license-renewal-for-farmers

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಬೆಳೆಗಳನ್ನು ವನ್ಯಜೀವಿಗಳಿಂದ ರಕ್ಷಿಸಲು ಬಳಸುವ ಕೋವಿ ಅಥವಾ ಬಂದೂಕು ಪರವಾನಗಿಗಳ (ಗನ್ ಲೈಸನ್ಸ್) ನವೀಕರಣ ಪ್ರಕ್ರಿಯೆಯಲ್ಲಿ ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು (ಡಿಜಿಪಿ) ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಕಾನೂನುಬದ್ಧವಾಗಿ ಬಂದೂಕು ಪರವಾನಗಿ ಪಡೆದಿರುವ ರೈತರ ನವೀಕರಣ ಅರ್ಜಿಗಳನ್ನು ಇತ್ತೀಚಿನ ದಿನಗಳಲ್ಲಿ ಕಠಿಣ ನಿಯಮಗಳ ನೆಪವೊಡ್ಡಿ ವ್ಯವಸ್ಥಿತವಾಗಿ ತಿರಸ್ಕರಿಸಲಾಗುತ್ತಿದೆ ಎಂಬುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದ ವಿಶೇಷವಾಗಿ ಕಾಡಿನಂಚಿನ ಪ್ರದೇಶಗಳಲ್ಲಿ ಕೃಷಿ ಮಾಡುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಬೆಳೆ ರಕ್ಷಣೆಗೆ ನೀಡಲಾಗುತ್ತಿದ್ದ ಕೋವಿ ಪರವಾನಗಿಗಳನ್ನು ಪ್ರತಿವರ್ಷ ವಾಡಿಕೆಯಂತೆ ನವೀಕರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ನವೀಕರಣ ಪ್ರಕ್ರಿಯೆಗೆ ಅನಗತ್ಯ ಅಡೆತಡೆಗಳನ್ನು ಸೃಷ್ಟಿಸಲಾಗುತ್ತಿದ್ದು, ಇದರಿಂದ ರೈತರು ಅಸಹಾಯಕರಾಗಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ.

ಕೃಷಿಕರು ತಮ್ಮ ದುಡಿಮೆಯ ಫಲವಾದ ಬೆಳೆಗಳನ್ನು ಕಾಡುಪ್ರಾಣಿಗಳ ದಾಳಿಯಿಂದ ರಕ್ಷಿಸಲು ಹಲವು ದಶಕಗಳಿಂದ ಈ ಪರವಾನಗಿ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ “ಕೃಷಿ ಭೂಮಿಗೆ ವನ್ಯಜೀವಿಗಳು ನುಗ್ಗಿಲ್ಲ ಅಥವಾ ಹಾನಿ ಮಾಡಿಲ್ಲ” ಎಂಬ ಕಾರಣ ನೀಡಿ ಅನೇಕ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂಬ ದೂರುಗಳು ತಮ್ಮ ಗಮನಕ್ಕೆ ಬಂದಿವೆ ಎಂದು ಚೌಟ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಸದ ಬ್ರಿಜೇಶ್ ಚೌಟ ತುರ್ತು ಮನವಿ

ರೈತರ ಬಳಿ ಪರವಾನಗಿ ಹೊಂದಿದ ಬಂದೂಕು ಇರುವುದೇ ವನ್ಯಜೀವಿಗಳನ್ನು ಕೃಷಿ ಭೂಮಿಗೆ ನುಗ್ಗದಂತೆ ತಡೆಯುವ ಪ್ರಮುಖ ಅಂಶವಾಗಿದೆ. ಕಾಡುಪ್ರಾಣಿಗಳ ದಾಳಿ ಯಾವಾಗ ಸಂಭವಿಸುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ರೈತರು ಬೆಳೆ ರಕ್ಷಣೆಗೆ ಅಗತ್ಯವಾದ ಸಾಧನಗಳಿಲ್ಲದೆ ಅಸಹಾಯಕರಾಗುವ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಅವರ ಜೀವನೋಪಾಯವೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಕಾನೂನು ಪಾಲಿಸುವ ಹಾಗೂ ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ರೈತರು ತಮ್ಮ ಆತ್ಮರಕ್ಷಣೆ ಮತ್ತು ಬೆಳೆ ರಕ್ಷಣೆಗಾಗಿ ಮಾತ್ರ ಪರವಾನಗಿ ಪಡೆದ ಬಂದೂಕುಗಳನ್ನು ಹೊಂದಿರುತ್ತಾರೆ. ಆದ್ದರಿಂದ ರೈತರ ಮೇಲೆ ಅನಗತ್ಯ ಕಠಿಣ ನಿಯಮಗಳನ್ನು ಹೇರದೆ, ವಾಸ್ತವಿಕ ಪರಿಸ್ಥಿತಿ ಪರಿಗಣಿಸಿ ಜಿಲ್ಲಾಡಳಿತವು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನು ಮರುಪರಿಶೀಲಿಸಿ ಸರಳೀಕರಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.

ಅರ್ಹತೆ ಹೊಂದಿರುವ ಹಾಗೂ ಎಲ್ಲಾ ನಿಯಮಗಳನ್ನು ಪಾಲಿಸುತ್ತಿರುವ ರೈತರ ಗನ್ ಲೈಸನ್ಸ್ ನವೀಕರಣ ಅರ್ಜಿಗಳನ್ನು ಯಾವುದೇ ಅಡೆತಡೆಯಿಲ್ಲದೆ ತ್ವರಿತವಾಗಿ ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದೇ ವೇಳೆ ರೈತರ ಈ ಗಂಭೀರ ಸಮಸ್ಯೆಯನ್ನು ರಾಜ್ಯ ಡಿಜಿಪಿ, ಪಶ್ಚಿಮ ವಲಯ ಐಜಿಪಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಗಮನಕ್ಕೂ ತಂದಿರುವುದಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು