ಬೆಂಗಳೂರು: ಬಹುಚರ್ಚಿತ ಕ್ರಿಪ್ಟೋಕರೆನ್ಸಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಹಲವೆಡೆ ದಾಳಿ ನಡೆಸಿದ್ದಾರೆ. ಕುಖ್ಯಾತ ಸೈಬರ್ ಕ್ರಿಮಿನಲ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಮತ್ತು ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಕುಟುಂಬಕ್ಕೆ ಸೇರಿದ ಕಚೇರಿ ಹಾಗೂ ನಿವಾಸಗಳ ಮೇಲೆ ಏಕಕಾಲಕ್ಕೆ ಶೋಧ ನಡೆಸಲಾಗಿದೆ.
ಸೋಮವಾರ ಬೆಳಿಗ್ಗೆ 6:30ರ ಸುಮಾರಿಗೆ ಕೇಂದ್ರ ಭದ್ರತಾ ಪಡೆಯೊಂದಿಗೆ ಆಗಮಿಸಿದ 100ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ರಾಜ್ಯದ ಸುಮಾರು 17 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯು ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ (PMLA), 2002ರ ಅಡಿಯಲ್ಲಿ ನಡೆದಿದೆ.

ಮುಖ್ಯವಾಗಿ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಅವರ ಆಪ್ತ ಒಮರ್ ಅವರ ನಿವಾಸ ಮತ್ತು ಸೈಬರ್ ಕ್ರಿಮಿನಲ್ ಶ್ರೀಕಿಯ ಸಹಚರರ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ಬಿಟ್‌ಕಾಯಿನ್ ಹಗರಣದ ಮೂಲಕ ಸಂಗ್ರಹವಾದ ಅಕ್ರಮ ಹಣವನ್ನು ವಿವಿಧ ಮೂಲಗಳ ಮೂಲಕ ವೈಟ್ ಮನಿ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಈ ತನಿಖೆ ತೀವ್ರಗೊಂಡಿದೆ. ಶ್ರೀಕಿ ಹ್ಯಾಕ್ ಮಾಡಿದ ಕ್ರಿಪ್ಟೋಕರೆನ್ಸಿ ಹಣವನ್ನು ಈ ಜಾಲದ ಮೂಲಕ ವರ್ಗಾವಣೆ ಮಾಡಲಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ವಾಟ್ಸಾಪ್‌ನಿಂದ ಬರ್ತಿದೆ ‘ಪ್ರೀಮಿಯಂ’ ಸೇವೆ: ಶೀಘ್ರದಲ್ಲೇ ‘ವಾಟ್ಸಾಪ್ ಪ್ಲಸ್’ ಬಿಡುಗಡೆ; ಯಾರೆಲ್ಲಾ ಹಣ ನೀಡಬೇಕು?
ಶಾಂತಿನಗರ ಮತ್ತು ಬೆಂಗಳೂರಿನ ಇತರ ಭಾಗಗಳಲ್ಲಿರುವ ಕಚೇರಿಗಳಲ್ಲಿ ಅಧಿಕಾರಿಗಳು ಪ್ರಮುಖ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಹೂಡಿಕೆಗೆ ಸಂಬಂಧಿಸಿದ ಫೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ತನಿಖೆ ನಡೆಯುತ್ತಿದ್ದು, ಈಗ ಇಡಿ ಪ್ರವೇಶ ಮಾಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

