ಬೆಂಗಳೂರು: ಕರ್ನಾಟಕದ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸರ್ಕಾರಿ ನಿವಾಸ, ಖಾಸಗಿ ಮನೆಗಳು ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ (ಸೆಪ್ಟೆಂಬರ್ 9) ಮುಂಜಾನೆಯೇ ಬೃಹತ್ ದಾಳಿ ನಡೆಸಿ, ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ.
ಬರೋಬ್ಬರಿ 18 ವಾಹನಗಳಲ್ಲಿ ಆಗಮಿಸಿದ ೨೫ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮತ್ತು ಕೇಂದ್ರೀಯ ಭದ್ರತಾ ಸಿಬ್ಬಂದಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಅಧಿಕಾರಿಗಳ ತಂಡವು ಮುಂಜಾನೆ 4 ಗಂಟೆಯಿಂದಲೇ ಕಾರ್ಯತಂತ್ರ ರೂಪಿಸಿಕೊಂಡು, ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಬೆಂಗಳೂರಿನ ಸಚಿವರ ಸರ್ಕಾರಿ ನಿವಾಸ ಹಾಗೂ ಕಚೇರಿಗಳ ಬಾಗಿಲು ತಟ್ಟಿದೆ. ಬೆಂಗಳೂರು ಒಂದರಲ್ಲೇ ಸಚಿವರಿಗೆ ಸೇರಿದ ಒಟ್ಟು ಆರು ಪ್ರಮುಖ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: “ರಾಹುಲ್ ಗಾಂಧಿಯವರೇ ಕರ್ನಾಟಕಕ್ಕೆ ಬನ್ನಿ, ನೇಮಕಾತಿ ಅಕ್ರಮದ ಅನುಭವ ಪಡೆಯಿರಿ”: ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು
ದಾಳಿ ನಡೆದ ಸಮಯದಲ್ಲಿ PWD ಸಚಿವ ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲೇ ಇದ್ದು, ಅಧಿಕಾರಿಗಳ ಪರಿಶೀಲನೆಗೆ ಸಹಕರಿಸುತ್ತಿದ್ದಾರೆ. ಇಡಿ ಅಧಿಕಾರಿಗಳು ಸಚಿವರ ಆಸ್ತಿಪಾಸ್ತಿ ದಾಖಲೆಗಳು, ಹಣಕಾಸು ವ್ಯವಹಾರಗಳು ಹಾಗೂ ಕಚೇರಿಯ ಪ್ರಮುಖ ಕಡತಗಳನ್ನು ವಶಕ್ಕೆ ಪಡೆದು ಸತತ ವಿಚಾರಣೆ ನಡೆಸುತ್ತಿದ್ದಾರೆ. ಮುಂಜಾನೆಯೇ ನಡೆದ ಈ ಹಠಾತ್ ದಾಳಿಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

