ಬೆಂಗಳೂರು: ಸಿಲಿಕಾನ್ ಸಿಟಿಯ ಮರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಾರ್ಸೆಲ್ ನೀಡಲು ಬಂದಿದ್ದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌ನ (Flipkart) ಡೆಲಿವರಿ ಏಜೆಂಟ್ ಒಬ್ಬ, ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಲೈಂಗಿಕ ಕಿರುಕುಳ ನೀಡಿ ವಿಕೃತಿ ಮೆರೆದಿದ್ದಾನೆ. ಸದ್ಯ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಜಯ್ ಮಲ್ಲಿಕಾರ್ಜುನ ಕಾಮತ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆ ತಮಗಾದ ಕಟು ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಮೇತ ಹಂಚಿಕೊಂಡ ಬಳಿಕ ಈ ಗಂಭೀರ ಪ್ರಕರಣ ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಂತ್ರಸ್ತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿವರಗಳ ಪ್ರಕಾರ, ಆರೋಪಿ ವಿಜಯ್ ಪಾರ್ಸೆಲ್ ತಲುಪಿಸಲು ಆಕೆಯ ಫ್ಲಾಟ್‌ಗೆ ಬಂದಿದ್ದನು. ಈ ವೇಳೆ ತನಗೆ ತುರ್ತಾಗಿ ಶೌಚಾಲಯ ಬಳಸಬೇಕಿದೆ ಎಂದು ಮಹಿಳೆಯನ್ನು ಕೇಳಿದ್ದಾನೆ. ಆದರೆ ಅಪರಿಚಿತರನ್ನು ಮನೆ ಒಳಗೆ ಬಿಡಲು ನಿರಾಕರಿಸಿದ ಮಹಿಳೆ, ಪಕ್ಕದ ಮನೆಯಲ್ಲಿ ಪುರುಷರಿದ್ದಾರೆ ಅಲ್ಲಿ ಕೇಳುವಂತೆ ಸೂಚಿಸಿದ್ದಾರೆ.
“ನಾನು ಹಲವು ಬಾರಿ ಅತ್ಯಂತ ನಯವಾಗಿಯೇ ಆತನಿಗೆ ನಿರಾಕರಿಸಿದೆ. ನನ್ನ ಫ್ಲಾಟ್ ಒಳಗೆ ಅಪರಿಚಿತರನ್ನು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ನನ್ನ ಮಾತನ್ನು ಲೆಕ್ಕಿಸದ ಆತ, ಬಲವಂತವಾಗಿ ತನ್ನ ಚಪ್ಪಲಿಗಳನ್ನು ಹೊರಗೆ ಬಿಟ್ಟು ನನ್ನ ಅನುಮತಿಯೇ ಇಲ್ಲದೆ ಮನೆ ಒಳಗಡೆ ನುಗ್ಗಿದ,” ಎಂದು ಮಹಿಳೆ ಭಾವುಕರಾಗಿ ಬರೆದುಕೊಂಡಿದ್ದಾರೆ.
“ಆತ ವಾಶ್‌ರೂಮ್‌ನಿಂದ ಹೊರಬಂದ ತಕ್ಷಣ, ನನ್ನ ಮುಂದೆ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ. ಆ ಕ್ಷಣದಲ್ಲಿ ನಾನು ಸಂಪೂರ್ಣವಾಗಿ ದಿಕ್ಕೆಟ್ಟು ಹೋದೆ. ನನ್ನದೇ ಸ್ವಂತ ಮನೆಯಲ್ಲಿ ನನಗೆ ರಕ್ಷಣೆಯಿಲ್ಲದಂತಾಯಿತು. ಒಬ್ಬ ಮಹಿಳೆ ‘ಬೇಡ’ ಎಂದು ಹೇಳಿದ ಮೇಲೆ ಆ ಚರ್ಚೆ ಅಲ್ಲಿಗೇ ಮುಗಿಯಬೇಕಿತ್ತು. ಆದರೆ ಆತ ನನ್ನ ಗಡಿಗಳನ್ನು ಮೀರಿ ದೌರ್ಜನ್ಯ ಎಸಗಿದ್ದಾನೆ,” ಎಂದು ಮಹಿಳೆ ತಮಗಾದ ಆಘಾತವನ್ನು ತೋಡಿಕೊಂಡಿದ್ದಾರೆ.
ಘಟನೆಯಿಂದ ತೀವ್ರ ಭಯಭೀತರಾಗಿದ್ದ ಮಹಿಳೆ, ತನ್ನ ರಕ್ಷಣೆಗಾಗಿ ತಕ್ಷಣವೇ ಮೊಬೈಲ್ ಕ್ಯಾಮರಾವನ್ನು ಆನ್ ಮಾಡಿಟ್ಟುಕೊಂಡಿದ್ದರು. ಅಷ್ಟೇ ಅಲ್ಲದೆ, ಏನಾದರೂ ಅನಾಹುತ ಸಂಭವಿಸಿದರೆ ತಕ್ಷಣವೇ ಹೊರಗೆ ಓಡಿಹೋಗಿ ಸಹಾಯ ಕೇಳಲು ಅನುಕೂಲವಾಗುವಂತೆ ಮನೆಯ ಮುಖ್ಯ ದ್ವಾರವನ್ನು ತೆರೆದಿಟ್ಟು, ಬಾಗಿಲಿನ ಬಳಿಯೇ ನಿಂತುಕೊಂಡಿದ್ದರು. “ದೇಶದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಸುದ್ದಿಯನ್ನು ಕೇಳಿ ನನಗೆ ತೀವ್ರ ಪ್ರಾಣಭಯ ಉಂಟಾಗಿತ್ತು,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ನಾಲ್ಕು ವರ್ಷಗಳ ಬಳಿಕ ಮತ್ತಿಬ್ಬರು ಆರೋಪಿಗಳು ಎನ್‌ಐಎ ಬಲೆಗೆ
ಮಹಿಳೆಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು ತಕ್ಷಣವೇ ಆಕೆಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಬಳಿಕ ಸಂತ್ರಸ್ತೆ ಮರತಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75 (ಲೈಂಗಿಕ ಕಿರುಕುಳ), 79 (ಮಹಿಳೆಯ ಘನತೆಗೆ ಧಕ್ಕೆ ತರುವುದು) ಮತ್ತು 329(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ವಿಜಯ್ ಮಲ್ಲಿಕಾರ್ಜುನ ಕಾಮತ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಸ್ತುತ ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

