ಕ್ಲಬ್ ಹೊರಗೆ ಇಬ್ಬರ ಮೇಲೆ ಹರಿದ ಮರ್ಸಿಡಿಸ್ ಕಾರು; ಚಕ್ರದಡಿ ಸಿಲುಕಿದರೂ ಎದ್ದು ನಡೆದ ಯುವಕ

ಚಂಡೀಗಢ: ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರೊಂದರ ಚಾಲಕ ಅತಿ ವೇಗ ಮತ್ತು ಬೇಜವಾಬ್ದಾರಿಯಿಂದ ಚಾಲನೆ ಮಾಡಿ ರಸ್ತೆಯಲ್ಲಿ ಭೀಕರ ಅಟ್ಟಹಾಸ ಮೆರೆದಿರುವ ಆಘಾತಕಾರಿ ಘಟನೆ ಚಂಡೀಗಢದ ಪ್ರಸಿದ್ಧ ಸೆಕ್ಟರ್ 26 ರ ಪೋಶ್ ಏರಿಯಾದಲ್ಲಿ ನಡೆದಿದೆ. ಶನಿವಾರ ಸಂಜೆ ಡಿಸ್ಕೋ ಕ್ಲಬ್ ಒಂದರ ಹೊರಭಾಗದಲ್ಲಿ ನಡೆದ ಈ ಹಿಟ್ ಅಂಡ್ ರನ್ ಘಟನೆಯ ಮೊಬೈಲ್ ವಿಡಿಯೋ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ನಡುಕ ಹುಟ್ಟಿಸಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಚಂಡೀಗಢದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈರಲ್ ಆಗಿರುವ ಮೊಬೈಲ್ ದೃಶ್ಯಾವಳಿಗಳ ಪ್ರಕಾರ, ಧೂಳು ಮತ್ತು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಹಠಾತ್ ಗೊಂದಲ ಸೃಷ್ಟಿಯಾದಾಗ ಮರ್ಸಿಡಿಸ್ ಕಾರ್ ವೇಗವಾಗಿ ಮುನ್ನುಗ್ಗಿದೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರ ಗುಂಪು ಕಾರನ್ನು ತಡೆಯಲು ಯತ್ನಿಸಿದೆ.

ಆದರೆ, ಅಲ್ಲಿಂದ ತಪ್ಪಿಸಿಕೊಳ್ಳುವ ಆತುರದಲ್ಲಿದ್ದ ಚಾಲಕ, ಕಾರನ್ನು ರಿವರ್ಸ್ (ಹಿಂದಕ್ಕೆ) ತೆಗೆದಿದ್ದಾನೆ. ಈ ವೇಳೆ ಹಿಂದೆ ಏನೂ ತಿಳಿಯದೆ ನಿಂತಿದ್ದ ಯುವಕನಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಯುವಕ ಕೆಳಗೆ ಬಿದ್ದಿದ್ದು, ಮರ್ಸಿಡಿಸ್ ಕಾರ್ ಆತನ ದೇಹದ ಮೇಲೆಯೇ ಸಂಪೂರ್ಣವಾಗಿ ಹರಿದು ಹೋಗಿದೆ. ಆದರೆ, ವಿಧಿಯ ಆಟ ಎಂಬಂತೆ ಇಡೀ ಕಾರ್ ದೇಹದ ಮೇಲೆ ಹರಿದು ಹೋದ ಕೆಲವೇ ಸೆಕೆಂಡುಗಳಲ್ಲಿ ಆ ಯುವಕ ಯಾವುದೇ ಭಾರಿ ಪ್ರಾಣಾಪಾಯವಿಲ್ಲದೆ ಪವಾಡಸದೃಶ ರೀತಿಯಲ್ಲಿ ಸ್ವತಃ ಎದ್ದು ನಿಂತು ನಡೆದುಕೊಂಡು ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸೆಕ್ಟರ್ 26 ರ ಬಾಬುಧಾಮ್ ಕಾಲೋನಿ ನಿವಾಸಿ ಅಮನ್‌ಜಾತ್ ಮತ್ತು ಸೆಕ್ಟರ್ 44 ರ ನಿವಾಸಿ ಅಲನ್ಸ್ ಪ್ರೀತ್ ಎಂಬ ಯುವಕರು ಶನಿವಾರ ಸಂಜೆ ಸೆಕ್ಟರ್ 26 ರಲ್ಲಿರುವ ಪ್ರಸಿದ್ಧ ಡಿಸ್ಕೋ ಕ್ಲಬ್‌ಗೆ ಪಾರ್ಟಿಗಾಗಿ ಬಂದಿದ್ದರು. ತಡರಾತ್ರಿ ಪಾರ್ಟಿ ಮುಗಿಸಿ ಅವರು ಕ್ಲಬ್‌ನಿಂದ ಹೊರಗೆ ಬರುತ್ತಿದ್ದಾಗ, ಅತಿ ವೇಗವಾಗಿ ಬಂದ ಮರ್ಸಿಡಿಸ್ ಕಾರ್ ಇಬ್ಬರಿಗೂ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಹನಿಮೂನ್ ಮರ್ಡರ್: ಪ್ರೀತಿಗಾಗಿ ಸಾಲ ಮಾಡಿ ಪತಿಯನ್ನು ಕೊಲೆ ಮಾಡಿಸಿದ ಪತ್ನಿ

ಘಟನೆಯ ಸುಳಿವು ಸಿಗುತ್ತಿದ್ದಂತೆಯೇ ಸೆಕ್ಟರ್ 26 ರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಗಾಯಾಳುಗಳನ್ನು ಜಿಎಂಸಿಹೆಚ್-32 (GMCH-32) ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತ ಎಸಗಿದ ತಕ್ಷಣ ಮರ್ಸಿಡಿಸ್ ಕಾರ್ ಚಾಲಕ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

“ಕ್ಲಬ್ ಸುತ್ತಮುತ್ತ ಹಾಗೂ ರಸ್ತೆಯಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ (CCTV) ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಕಾರಿನ ನಂಬರ್ ಪ್ಲೇಟ್ ಪತ್ತೆಹಚ್ಚಲು ತಾಂತ್ರಿಕ ಸಾಕ್ಷ್ಯಗಳನ್ನು ಬಳಸಲಾಗುತ್ತಿದೆ. ಸಿಸಿಟಿವಿ ಹಾಗೂ ವೈರಲ್ ಮೊಬೈಲ್ ವಿಡಿಯೋ ಆಧಾರದ ಮೇಲೆ ಆರೋಪಿ ಚಾಲಕನನ್ನು ಶೀಘ್ರದಲ್ಲೇ ಗುರುತಿಸಿ ಬಂಧಿಸಲಾಗುವುದು,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *