ತಮಿಳುನಾಡು ಗೋಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ: ಮದ್ರಾಸ್ ಹೈಕೋರ್ಟ್‌ ತೀರ್ಪು ಕಾನೂನು ಚೌಕಟ್ಟು ಮೀರಿದೆ

ದೆಹಲಿ: ತಮಿಳುನಾಡಿನಲ್ಲಿ ಗೋಹತ್ಯೆ ಮಾಡದಂತೆ ಸಂಪೂರ್ಣ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಸದ್ಯ ಮಧ್ಯಂತರ ತಡೆ (Stay) ನೀಡಿದೆ. ಮದ್ರಾಸ್ ಹೈಕೋರ್ಟ್‌ನ ಈ ಕಠಿಣ ನಿರ್ದೇಶನವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಕ್ರಮ್ ನಾಥ್ ಮತ್ತು ಜಸ್ಟಿಸ್ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಹೈಕೋರ್ಟ್ ಆದೇಶಕ್ಕೆ ಬ್ರೇಕ್ ಹಾಕಿದ್ದು, ರಾಜ್ಯದಲ್ಲಿದ್ದ ಹಳೆಯ ನಿಯಂತ್ರಿತ ಗೋಹತ್ಯೆ ನಿಯಮವೇ ಸದ್ಯಕ್ಕೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರದ ಪರ ವಕೀಲರು ಹೈಕೋರ್ಟ್‌ನ ತೀರ್ಪಿನ ವಿರುದ್ಧ ಪ್ರಬಲ ಆಕ್ಷೇಪಗಳನ್ನು ಮಂಡಿಸಿದರು. ಮೂಲತಃ ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು (PIL) ಕೇವಲ “ಸಾರ್ವಜನಿಕ ಸ್ಥಳಗಳಲ್ಲಿ” ಕಾನೂನುಬಾಹಿರವಾಗಿ ಗೋಹತ್ಯೆ ಮಾಡುವುದನ್ನು ತಡೆಯಲು ಮಾತ್ರ ಸೀಮಿತವಾಗಿತ್ತು. ಆದರೆ ಹೈಕೋರ್ಟ್ ಈ ಅರ್ಜಿಯ ವ್ಯಾಪ್ತಿಯನ್ನು ಮೀರಿ ಇಡೀ ರಾಜ್ಯಾದ್ಯಂತ ಗೋಹತ್ಯೆಯನ್ನೇ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದು ಕಾನೂನು ಚೌಕಟ್ಟನ್ನು ಮೀರಿದ ಕ್ರಮ ಎಂದು ಸರ್ಕಾರ ವಾದಿಸಿತು.

ಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958ರ ಅಡಿಯಲ್ಲಿ ರಾಜ್ಯದಲ್ಲಿ ಈಗಾಗಲೇ ಸ್ಪಷ್ಟ ನಿಯಮಗಳಿವೆ. ಈ ಕಾಯ್ದೆಯ ಪ್ರಕಾರ, 10 ವರ್ಷ ಮೇಲ್ಪಟ್ಟ ಹಾಗೂ ಕೃಷಿ ಅಥವಾ ಹೈನುಗಾರಿಕೆಗೆ ಅಸಮರ್ಥವಾಗಿರುವ ಹಸುಗಳ ಹತ್ಯೆಗೆ ಕಾನೂನಿನಲ್ಲಿ ಕೆಲವು ಷರತ್ತುಬದ್ಧ ಅವಕಾಶಗಳನ್ನು ಕಲ್ಪಿಸಲಾಗಿದೆ. ಹೀಗಿರುವಾಗ ಹೈಕೋರ್ಟ್ ಇಡೀ ಕಾಯ್ದೆಯನ್ನೇ ಬದಿಗೊತ್ತಿ ಆದೇಶ ನೀಡಿರುವುದು ಸರಿಯಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.

ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಪರಸ್ಪರ ವಿರೋಧಾಭಾಸದ ಅಂಶಗಳು ಪತ್ತೆಯಾಗಿರುವುದನ್ನು ಸುಪ್ರೀಂಕೋರ್ಟ್‌ನಲ್ಲಿ ಚರ್ಚಿಸಲಾಯಿತು. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಧಿಕೃತ ಕಸಾಯಿಖಾನೆಗಳಲ್ಲಿ ಹತ್ಯೆ ಮಾಡಬಹುದು ಎಂದು ಹೇಳುತ್ತಲೇ, ಮತ್ತೊಂದೆಡೆ ಸಂಪೂರ್ಣ ನಿಷೇಧದ ಮಾತನ್ನಾಡಿ ಗೊಂದಲ ಸೃಷ್ಟಿಸಿತ್ತು.

ಅಲ್ಲದೆ, ಹೈಕೋರ್ಟ್ ಈ ನಿಷೇಧವನ್ನು ಹೇರಲು 1976ರ ಹಳೆಯ ಸರ್ಕಾರಿ ಆದೇಶವೊಂದನ್ನು ಆಧಾರವಾಗಿಟ್ಟುಕೊಂಡಿತ್ತು. ಆದರೆ ಇಂತಹ ಹಳೆಯ ಆದೇಶವನ್ನು ಬಳಸುವ ಮುನ್ನ ಕೋರ್ಟ್ ರಾಜ್ಯ ಸರ್ಕಾರಕ್ಕೆ ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡಿರಲಿಲ್ಲ. ಪ್ರಸ್ತುತ ಜಾರಿಯಲ್ಲಿರುವ ಶಾಸನಬದ್ಧ ಕಾನೂನನ್ನು ಮೀರಿಸಲು ಇಂತಹ ಹಳೆಯ ಸರ್ಕಾರಿ ಆದೇಶಗಳಿಗೆ ಸಾಧ್ಯವಿಲ್ಲ ಎಂಬ ತರ್ಕವನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.

ಇದನ್ನೂ ಓದಿ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ: ಅರ್ಜುನ್ ಸಿಂಗ್

ಹೈಕೋರ್ಟ್‌ನ ಹಠಾತ್ ನಿಷೇಧದ ತೀರ್ಪಿನಿಂದಾಗಿ ತಮಿಳುನಾಡು ರಾಜ್ಯ ಸರ್ಕಾರ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಭಾರಿ ಆಡಳಿತಾತ್ಮಕ ಗೊಂದಲಗಳು ಸೃಷ್ಟಿಯಾಗಿದ್ದವು. ವಿಶೇಷವಾಗಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಇದು ಕಾನೂನು ಬಿಕ್ಕಟ್ಟಿಗೆ ಕಾರಣವಾಗಿತ್ತು. ಈಗ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿರುವುದರಿಂದ ಆ ಎಲ್ಲಾ ಗೊಂದಲಗಳಿಗೆ ಸದ್ಯಕ್ಕೆ ತೆರೆಬಿದ್ದಿದೆ. ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958ರ ಅಡಿಯಲ್ಲಿ ಈ ಹಿಂದೆ ಜಾರಿಯಲ್ಲಿದ್ದ ನಿಯಂತ್ರಿತ ಗೋಹತ್ಯೆ ನಿಯಮಾವಳಿಗಳೇ ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *