2 ಲಕ್ಷದಿಂದ ಆರಂಭವಾದ ಕ್ಲೌಡ್ ಕಿಚನ್ ತಂದಿಟ್ಟಿತು 1 ಕೋಟಿ ಸಾಲದ ಗಂಡಾಂತರ!: 25ರ ಯುವ ಉದ್ಯಮಿಯ ‘ನೈಟ್‌ಮೇರ್ ಸ್ಟೋರಿ’

ಯುವ ಜನತೆಯಲ್ಲಿ ಸ್ಟಾರ್ಟ್‌ಅಪ್ ಮತ್ತು ಸ್ವಂತ ಉದ್ಯಮದ ಕ್ರೇಜ್ ಹೆಚ್ಚಾಗುತ್ತಿದೆ. ಆದರೆ ಸರಿಯಾದ ಹಣಕಾಸು ಯೋಜನೆ ಇಲ್ಲದಿದ್ದರೆ ಉದ್ಯಮ ಹೇಗೆ ಮುಳುಗಬಹುದು ಎಂಬುದಕ್ಕೆ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ (Reddit) ವೈರಲ್ ಆಗಿರುವ 25 ವರ್ಷದ ಯುವಕನೊಬ್ಬನ ಈ ಕಥೆಯೇ ಜೀವಂತ ಸಾಕ್ಷಿ. ಕ್ಲೌಡ್ ಕಿಚನ್ ಉದ್ಯಮವನ್ನು ಅತಿ ವೇಗವಾಗಿ ವಿಸ್ತರಿಸಲು ಹೋಗಿ ಬರೋಬ್ಬರಿ 1 ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿರುವ ಈ ಯುವಕ, ಈಗ ಸಾಲದಿಂದ ಹೊರಬರಲು ಇಂಟರ್ನೆಟ್ ಬಳಕೆದಾರರ ಮುಂದೆ ಆರ್ಥಿಕ ಸಲಹೆಗಾಗಿ ಜೋಳಿಗೆ ಹಿಡಿದು ನಿಂತಿದ್ದಾನೆ.

ಆರ್‌/ಇಂಡಿಯಾಬಿಸಿನೆಸ್ ಎಂಬ ರೆಡ್ಡಿಟ್ ಪೇಜ್‌ನಲ್ಲಿ ಯುವಕ ತನ್ನ ಕಥೆಯನ್ನು ಹಂಚಿಕೊಂಡಿದ್ದಾನೆ. 2021ರಲ್ಲಿ ಬಿಪಿಒ  ನೌಕರಿಯಿಂದ ಲೇ-ಆಫ್ (ಕೆಲಸದಿಂದ ವಜಾ) ಆಗಿದ್ದ ಈತ, 2023ರಲ್ಲಿ ತನ್ನ ಸಂಬಂಧಿಕರಿಂದ 2 ಲಕ್ಷ ರೂಪಾಯಿ ಸಾಲ ಪಡೆದು ಸಣ್ಣದಾಗಿ ಒಂದು ಕ್ಲೌಡ್ ಕಿಚನ್/ಕೆಫೆ ಆರಂಭಿಸಿದ್ದನು. ಆರಂಭದಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದು ಉತ್ತಮ ಲಾಭ ತಂದುಕೊಟ್ಟಿತು. ಆದರೆ, ಇದೇ ಯಶಸ್ಸಿನ ಅಮಲಿನಲ್ಲಿ ಆತ ಕೈಕೊಂಡ ‘ಅಗ್ರೆಸ್ಸಿವ್ ಎಕ್ಸ್‌ಪ್ಯಾನ್ಷನ್’ (ಅತಿಯಾದ ಉದ್ಯಮ ವಿಸ್ತರಣೆ) ಯೋಜನೆ ಇಡೀ ವ್ಯವಹಾರವನ್ನೇ ಬುಡಮೇಲು ಮಾಡಿತು.

ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ಯುವಕ ದೊಡ್ಡ ಜಾಗವನ್ನು ಬಾಡಿಗೆಗೆ ಪಡೆದು, ದುಬಾರಿ ಕಿಚನ್ ಉಪಕರಣಗಳನ್ನು ಖರೀದಿಸಲು ಆರಂಭಿಸಿದನು. ಆದರೆ ಈ ಎಲ್ಲಾ ವಿಸ್ತರಣೆಗಳಿಗೆ ಆತ ಬಳಸಿದ್ದು ಮತ್ತಷ್ಟು ಸಾಲದ ಹಣವನ್ನು! ನೋಡನೋಡುತ್ತಿದ್ದಂತೆ 2 ಲಕ್ಷದಲ್ಲಿದ್ದ ಸಾಲದ ಮೊತ್ತ ಬರೋಬ್ಬರಿ 1 ಕೋಟಿ ರೂಪಾಯಿಗೆ ಬಂದು ತಲುಪಿತು. ಉಪಹಾರ ಗೃಹಕ್ಕೆ ಗ್ರಾಹಕರೇನೋ ಬರುತ್ತಿದ್ದರು, ಆದಾಯವೂ ಇತ್ತು. ಆದರೆ ದುಬಾರಿ ಬಡ್ಡಿಯ ಕಾರಣದಿಂದಾಗಿ ಬಂದ ಹಣವೆಲ್ಲಾ ಸಾಲದ ಕಂತು (EMI) ಕಟ್ಟಲು ಹಾಗೂ ಬಡ್ಡಿ ತೀರಿಸಲಷ್ಟೇ ವಿನಿಯೋಗವಾಗುತ್ತಿತ್ತು. ಇದರಿಂದಾಗಿ ಉದ್ಯಮದ ನಗದು ಹರಿವು (Cash Flow) ಸಂಪೂರ್ಣ ಕುಸಿಯಿತು.

ಯುವಕ ತನ್ನ 1 ಕೋಟಿ ಸಾಲದ ವಿವರವನ್ನು ನೀಡಿದ್ದು, ಅದರಲ್ಲಿ 45 ಲಕ್ಷ ರೂಪಾಯಿ ಮೌಲ್ಯದ ಮನೆ ಅಡಮಾನ ಸಾಲ (Mortgage Loan) ಹಾಗೂ ಉಳಿದ 40 ರಿಂದ 45 ಲಕ್ಷ ರೂಪಾಯಿ ಖಾಸಗಿ ಲೇವಾದೇವಿದಾರರಿಂದ (Private Lenders) ಪಡೆದ ಸಾಲವಾಗಿತ್ತು. ಈ ಖಾಸಗಿ ಸಾಲಗಳು ಅತ್ಯಂತ ಭೀಕರವಾಗಿದ್ದವು. ಕೆಲವು ಲೇವಾದೇವಿದಾರರು ತಿಂಗಳಿಗೆ ಶೇಕಡಾ 10 ರಷ್ಟು ಬಡ್ಡಿ ವಿಧಿಸಿದರೆ, ಇನ್ನು ಕೆಲವರು ಅಸಲಿನ ಮೇಲೆ ಪ್ರತಿದಿನ ಶೇಕಡಾ 1 ರಷ್ಟು ಮರುಪಾವತಿಗೆ ಒತ್ತಾಯಿಸುತ್ತಿದ್ದರು.

“ಸಾಲಗಾರರ ಕಿರುಕುಳ ಮತ್ತು ತೀವ್ರ ಮಾನಸಿಕ ಒತ್ತಡದಿಂದಾಗಿ ನಾನು ಅಲ್ಪಾವಧಿಯಲ್ಲಿಯೇ ಬರೋಬ್ಬರಿ 25 ಕೆಜಿ ತೂಕ ಕಳೆದುಕೊಂಡೆ. ನನ್ನ ಪರಿಸ್ಥಿತಿ ನೋಡಿ ಕುಟುಂಬದವರು ಕಣ್ಣೀರು ಹಾಕಿದರು. ಕೊನೆಗೆ ನನ್ನ ತಾಯಿಯ ಕಡೆಯ ಸಂಬಂಧಿಕರು ಪರಿಸ್ಥಿತಿ ಅರಿತು 30 ಲಕ್ಷ ರೂಪಾಯಿ ನೀಡಿ ಭಾಗಶಃ ಸಾಲ ತೀರಿಸಲು ಸಹಾಯ ಮಾಡಿದರು. ಆದರೆ ವ್ಯವಹಾರವನ್ನು ತಕ್ಷಣವೇ ಬಂದ್ ಮಾಡಬೇಕೆಂದು ಶರತ್ತು ವಿಧಿಸಿದರು” ಎಂದು ಯುವಕ ಬರೆದುಕೊಂಡಿದ್ದಾನೆ.

ಇದನ್ನೂ ಓದಿ: ಹೆಂಡತಿ ಜೊತೆ ಜಗಳವಾಡಿ ಸೈಲೆಂಟ್ ಆದ ಗೊರಿಲ್ಲಾ ಸಿಂಗಂ!: ಈ ವಿಡಿಯೋ ನೋಡಿ ಬಿದ್ದು ಬಿದ್ದು ನಗುತ್ತಿರುವ ಗಂಡಂದಿರು!

ಆತನ ಪ್ರಸ್ತುತ ಕುಟುಂಬದ ಆರ್ಥಿಕ ಸ್ಥಿತಿ ಹೀಗಿದೆ:

ಬಾಕಿ ಉಳಿದಿರುವ ಸಾಲ: ಸುಮಾರು 70 ಲಕ್ಷ ರೂಪಾಯಿ.

ಮನೆಯ ಸಾಲದ ಇಎಂಐ: ತಿಂಗಳಿಗೆ 67,000 ರೂಪಾಯಿ.

ತಾಯಿಯ ಆದಾಯ: ತಿಂಗಳಿಗೆ 15,000 ರೂಪಾಯಿ.

ಸಹೋದರಿಯ ಆದಾಯ: ತಿಂಗಳಿಗೆ 36,000 ರೂಪಾಯಿ.

ಸಿಬಿಲ್ ಸ್ಕೋರ್ (CIBIL Score): ಸಂಪೂರ್ಣವಾಗಿ ಹಾಳಾಗಿದೆ.

ಆಸ್ತಿ: ಮಾರಾಟವಾಗದೇ ಉಳಿದಿರುವ ಕೆಲವು ಕಿಚನ್ ಸೆಟಪ್ ಉಪಕರಣಗಳು ಮಾತ್ರ.

ಸದ್ಯ ತನ್ನ ಬಳಿ ಇರುವ ಕಿಚನ್ ಉಪಕರಣಗಳನ್ನು ಬಳಸಿ ಮತ್ತೆ 2 ಲಕ್ಷ ರೂಪಾಯಿ ಸಾಲ ಮಾಡಿ ಸಣ್ಣದಾಗಿ ಕೆಫೆ ಆರಂಭಿಸಬೇಕೇ? ಅಥವಾ ಉದ್ಯಮದ ಸಹವಾಸವೇ ಬೇಡವೆಂದು ತಿಂಗಳಿಗೆ 15-20 ಸಾವಿರದ ಸಣ್ಣ ಕೆಲಸಕ್ಕೆ ಸೇರಿಕೊಳ್ಳಬೇಕೇ? Carry ಮಾಡ್ತಿರೋ 70 ಲಕ್ಷ ಸಾಲವನ್ನು ಹೇಗೆ ತೀರಿಸಲಿ ಎಂದು ಯುವಕ ನೆಟ್ಟಿಗರ ಮುಂದೆ ಅಳಲು ತೋಡಿಕೊಂಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, “ಮತ್ತೆ ಸಾಲದ ತಪ್ಪು ಮಾಡಬೇಡಿ, ಸದ್ಯಕ್ಕೆ ದಿವಾಳಿತನ (Bankruptcy) ಘೋಷಿಸಿ ಸಣ್ಣ ನೌಕರಿ ಹಿಡಿದು ನೆಮ್ಮದಿಯಿಂದ ಇರಿ” ಎಂದು ಬುದ್ಧಿವಾದ ಹೇಳುತ್ತಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು