ಬೆಂಗಳೂರು: ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲಿ ಸುಮಾರು 1 ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಭೇಟಿಯನ್ನು ಉಭಯ ನಾಯಕರು ‘ಔಪಚಾರಿಕ ಭೇಟಿ’ ಎಂದು ಕರೆದಿದ್ದರೂ, ಕಾಂಗ್ರೇಸ್ ಪಕ್ಷದ ಆಂತರಿಕ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
22,267 ಕೋಟಿ ಟನಲ್ ಪ್ರಾಜೆಕ್ಟ್, ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ನಿರ್ಮಿಸಲು ಉದ್ದೇಶಿಸಿರುವ 16.75 ಕಿ.ಮೀ ಉದ್ದದ ಟ್ವಿನ್ ಟನಲ್ ರಸ್ತೆ ಯೋಜನೆಗೆ ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯು ಅತ್ಯಂತ ಕಡಿಮೆ ಮೊತ್ತದ ಬಿಡ್ (L1 ಬಿಡ್ಡರ್) ಸಲ್ಲಿಸಿದೆ.
ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಮಾತನಾಡಿ, “ರಾಹುಲ್ ಗಾಂಧಿಯವರು ದೆಹಲಿಯಲ್ಲಿ ಅದಾನಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾರೆ, ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅದಾನಿಗೆ ಕೆಂಪುಹಾಸು ಹಾಸಿ ಸ್ವಾಗತಿಸುತ್ತಿದೆ. ಈ ಭೇಟಿಗೆ ರಾಹುಲ್ ಗಾಂಧಿಯವರ ಒಪ್ಪಿಗೆ ಇದೆಯೇ?” ಎಂದು ಸವಾಲು ಹಾಕಿದ್ದಾರೆ.
ಟನಲ್ ರಸ್ತೆ ಯೋಜನೆಗೆ ಖಾಸಗಿ ಜಮೀನು ಸ್ವಾಧೀನ ವೆಚ್ಚ ತಪ್ಪಿಸಲು ಸರ್ಕಾರ ಕೆರೆ ಮತ್ತು ಉದ್ಯಾನವನಗಳ ಜಾಗವನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ. ಈ ಭೇಟಿಯು ‘ತಪ್ಪಿಸಬಹುದಾಗಿದ್ದ ಸನ್ನಿವೇಶ’ವಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕವಾಗಿ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಅದಾನಿ ಗ್ರೂಪ್ ರಾಜ್ಯದಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಹೊಂದಿದೆ. ಅವರು ಭೇಟಿಯಾಗಲು ಸಮಯ ಕೇಳಿದ್ದರು, ಹೀಗಾಗಿ ಔಪಚಾರಿಕವಾಗಿ ಭೇಟಿ ನೀಡಿದ್ದಾರೆ, ಯಾವುದೇ ವಿಶೇಷ ವಿಷಯಗಳ ಚರ್ಚೆಯಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು ಹಲ್ಲೆ ಪ್ರಕರಣ: ತಾವು ಏನೂ ಮಾಡಿದರೂ ನಮ್ಮ ಬೆಂಬಲಕ್ಕೆ ಸರ್ಕಾರ ಇದೆ ಎಂಬ ಧೈರ್ಯ ಅವರಿಗೆ: ಕಟೀಲ್ ಆಕ್ರೋಶ
ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಈ ಭೇಟಿ ನಡೆದಿದ್ದು, ಕರಾವಳಿ ಹಾಗೂ ಕರಾವಳಿಯೇತರ ಮೂಲಸೌಕರ್ಯ ಹೂಡಿಕೆಗಳ ಕುರಿತು ಮಾತುಕತೆ ನಡೆದಿದೆ ಎಂಬ ಊಹಾಪೋಹಗಳು ಎದ್ದಿವೆ. ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗುವ ಮುನ್ನ ಗೌತಮ್ ಅದಾನಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ, ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದುಕೊಂಡಿದ್ದರು.

