ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಇಂದು ರಾಜಭವನದ ಲೋಕ ಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆದಿದೆ. ಎಐಸಿಸಿ (AICC) ಹೈಕಮಾಂಡ್ 20 ಮಂದಿ ನಾಯಕರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿತ್ತಾದರೂ, ಅಂತಿಮವಾಗಿ 19 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹೈಕಮಾಂಡ್ ಅನುಮೋದಿಸಿದ ಪಟ್ಟಿಯಲ್ಲಿದ್ದ ಚಿಕ್ಕಮಗಳೂರಿನ ನೂತನ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಕೊನೆ ಕ್ಷಣದಲ್ಲಿ ಪ್ರಮಾಣವಚನದಿಂದ ದೂರ ಉಳಿಯುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದ್ದಾರೆ.
ರಾಜಭವನದಲ್ಲಿ ಪ್ರಮಾಣವಚನ ಪ್ರಕ್ರಿಯೆ ಆರಂಭಗೊಳ್ಳುವ ಕೆಲವೇ ಕ್ಷಣಗಳ ಮುನ್ನ ತೀವ್ರ ರಾಜಕೀಯ ಕಸರತ್ತು ನಡೆದಿದೆ. ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಕಾಂಗ್ರೆಸ್ನ ಇತರ ಹಿರಿಯ ಮಹಿಳಾ ಶಾಸಕರು ಹಾಗೂ ಸಚಿವ ಆಕಾಂಕ್ಷಿಗಳಿಂದ ಭಾರಿ ವಿರೋಧ ಹಾಗೂ ತೀವ್ರ ಪೈಪೋಟಿ ವ್ಯಕ್ತವಾಯಿತು ಎನ್ನಲಾಗಿದೆ.
ನೂತನವಾಗಿ ಮೇಲ್ಮನೆಗೆ ಆಯ್ಕೆಯಾದ ಗಾಯತ್ರಿ ಅವರಿಗೆ ತಕ್ಷಣವೇ ಮಂತ್ರಿಗಿರಿ ನೀಡಿರುವುದಕ್ಕೆ ಪಕ್ಷದ ಹಿರಿಯ ಶಾಸಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹೈಕಮಾಂಡ್ ನಾಯಕರು, ಬಂಡಾಯದ ಕಿಡಿಯನ್ನು ಶಮನಗೊಳಿಸಲು ಗಾಯತ್ರಿ ಶಾಂತೇಗೌಡ ಅವರ ಪ್ರಮಾಣವಚನವನ್ನು ತಾತ್ಕಾಲಿಕವಾಗಿ ತಡೆಹಿಡಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ಬೆದರಿಕೆ ಹಾಕಿರುವ ಅಸಮಾಧಾನಿತ ನಾಯಕರನ್ನು ಸಮಾಧಾನಪಡಿಸಲು ಕೊನೆ ಕ್ಷಣದಲ್ಲಿ ವರಿಷ್ಠರು ಈ ದಿಢೀರ್ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ನಿಂದ ಬಿಡುಗಡೆಯಾಗಿದ್ದ 20 ಜನರ ಪೈಕಿ ಗಾಯತ್ರಿ ಶಾಂತೇಗೌಡ ಅವರನ್ನು ಹೊರತುಪಡಿಸಿ, ಎಸ್.ಎಸ್. ಮಲ್ಲಿಕಾರ್ಜುನ್, ರುದ್ರಪ್ಪ ಲಮಾಣಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ 19 ನಾಯಕರು ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಬಂಡಾಯದ ಕಿಡಿ: ಸಾಲು ಸಾಲು ರಾಜೀನಾಮೆಗೆ ಮುಂದಾದ ಶಾಸಕರು
ಎಐಸಿಸಿ ನೀಡಿದ್ದ ಮೊದಲ ಪಟ್ಟಿಯಲ್ಲಿದ್ದ ಶಾಸಕ ಮಂಕಾಳು ವೈದ್ಯ ಅವರ ಹೆಸರನ್ನು ‘ಟೈಪಿಂಗ್ ಮಿಸ್ಟೇಕ್’ ನೆಪದಲ್ಲಿ ತೆಗೆದು, ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಅವಕಾಶ ಕಲ್ಪಿಸಲಾಯಿತು. ಸಂಪುಟ ವಿಸ್ತರಣೆಯು ಪೂರ್ಣಗೊಂಡ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಗಾಯತ್ರಿ ಶಾಂತೇಗೌಡ ಅವರ ಮುಂದಿನ ನಡೆ ಹಾಗೂ ಹೈಕಮಾಂಡ್ ನೀಡಿರುವ ಭರವಸೆ ಏನೆಂಬುದು ಕಾದುನೋಡಬೇಕಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

