ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಯು (Transport Department) ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ಮುಂದೆ ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ (Half Helmet) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ (Ban) ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.
ಸವಾರರ ಪ್ರಾಣಕ್ಕೆ ಸುರಕ್ಷಿತವಲ್ಲದ ಇಂತಹ ಹೆಲ್ಮೆಟ್‌ಗಳನ್ನು ಧರಿಸಿ ರಸ್ತೆಗೆ ಇಳಿದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ಐಎಸ್‌ಐ / ಬಿಐಎಸ್ ಮಾನದಂಡ ಕಡ್ಡಾಯ:
ಗುಣಮಟ್ಟದ ಹೆಲ್ಮೆಟ್ ಮಾತ್ರ ಬಳಸಿ: ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ‘ಬಿಐಎಸ್’ (BIS) ಅಥವಾ ‘ಐಎಸ್‌ಐ’ (ISI) ಗುಣಮಟ್ಟದ ಮಾನದಂಡಗಳನ್ನು ಹೊಂದಿರುವ ಫುಲ್ ಫೇಸ್ ಹೆಲ್ಮೆಟ್‌ಗಳನ್ನು ಮಾತ್ರ ಧರಿಸಬೇಕು.
ಹಾಫ್ ಹೆಲ್ಮೆಟ್ ಸುರಕ್ಷಿತವಲ್ಲ: ರಸ್ತೆ ಅಪಘಾತಗಳ ಸಮಯದಲ್ಲಿ ಹಾಫ್ ಹೆಲ್ಮೆಟ್‌ಗಳು ತಲೆ ಹಾಗೂ ಗಲ್ಲದ ಭಾಗಕ್ಕೆ ಯಾವುದೇ ಸೂಕ್ತ ರಕ್ಷಣೆ ನೀಡುವುದಿಲ್ಲ. ಹೀಗಾಗಿ ಸವಾರರ ಜೀವಕ್ಕೆ ತೀವ್ರ ಅಪಾಯ ಉಂಟಾಗುತ್ತಿರುವುದನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದಂಡದ ಎಚ್ಚರಿಕೆ: ಸರ್ಕಾರದ ಆದೇಶವನ್ನು ಮೀರಿದರೆ ಅಥವಾ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ಸಂಚಾರ ಪೊಲೀಸರು ಸವಾರರಿಗೆ ದಂಡ ವಿಧಿಸಲಿದ್ದಾರೆ.
ತಯಾರಕರು ಹಾಗೂ ಮಾರಾಟಗಾರರಿಗೂ ಕಾನೂನು ಕ್ರಮದ ಬಿಸಿ:
ಕೇವಲ ಸವಾರರಷ್ಟೇ ಅಲ್ಲದೆ, ಹಾಫ್ ಹೆಲ್ಮೆಟ್ ತಯಾರಿಸುವ ಸಂಸ್ಥೆಗಳು ಹಾಗೂ ಅವುಗಳನ್ನು ಮಾರಾಟ ಮಾಡುವ ಅಂಗಡಿಯಾಯಸ್ಥರ ಮೇಲೆಯೂ ಸಾರಿಗೆ ಇಲಾಖೆ ಕಣ್ಣಿಟ್ಟಿದೆ. ಬಿಐಎಸ್ ಮಾನದಂಡವಿಲ್ಲದ ಹಾಫ್ ಹೆಲ್ಮೆಟ್‌ಗಳನ್ನು ತಯಾರಿಸಿದರೆ ಅಥವಾ ಮಾರಾಟ ಮಾಡುವುದು ಕಂಡುಬಂದರೆ ಅವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

