ದಾವಣಗೆರೆ ಬಳಿ 4 ಗಂಟೆ ನಿಂತಲ್ಲೇ ನಿಂತ ‘ವಂದೇ ಭಾರತ್’ ಸೇರಿದಂತೆ 4 ರೈಲುಗಳು

ದಾವಣಗೆರೆ : ಹೊಸ ರೈಲ್ವೆ ಮಾರ್ಗದ ಕಾಮಗಾರಿಯಿಂದಾಗಿ ದಾವಣಗೆರೆ ಜಿಲ್ಲೆಯ ಮಾಯಕೊಂಡ ನಿಲ್ದಾಣದ ಬಳಿ ‘ವಂದೇ ಭಾರತ್’ (Vande Bharat Express) ಸೇರಿದಂತೆ ಒಟ್ಟು ನಾಲ್ಕು ಪ್ರಮುಖ ರೈಲುಗಳು ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಿಂತಲ್ಲೇ ನಿಲ್ಲುವಂತಾಯಿತು. ಇದರಿಂದಾಗಿ ಬೆಂಗಳೂರಿನಿಂದ ಬೆಳಗಾವಿ ಹಾಗೂ ಇತರೆ ಭಾಗಗಳಿಗೆ ಪ್ರಯಾಣಿಸುತ್ತಿದ್ದ ನೂರಾರು ಪ್ರಯಾಣಿಕರು ತೀವ್ರ ಪರದಾಟ ನಡೆಸಿದ ಘಟನೆ ನಡೆದಿದೆ.

ರೈಲುಗಳು ಎಲ್ಲೆಲ್ಲಿ ಸ್ಥಗಿತಗೊಂಡಿದ್ದವು?:

ರೈಲ್ವೆ ಮಾರ್ಗದ ತುರ್ತು ಕಾಮಗಾರಿಯಿಂದಾಗಿ ಒಟ್ಟು 4 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಂದೇ ಭಾರತ್ ರೈಲು ಮಾಯಕೊಂಡ ನಿಲ್ದಾಣದಲ್ಲಿ ಸ್ಥಗಿತಗೊಂಡಿತ್ತು. ಇನ್ನುಳಿದ 3 ರೈಲುಗಳು ಕೊಡಗನೂರು, ಸಾಸಲು ಹಾಗೂ ಶಿವನಿ ನಿಲ್ದಾಣಗಳ ಬಳಿ ನಿಂತಿದ್ದವು. ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಮಾರ್ಗಮಧ್ಯದಲ್ಲೇ ನಿಂತಿದ್ದ ರೈಲುಗಳು, ನಂತರ ಸಂಚಾರವನ್ನು ಪುನರಾರಂಭಿಸಿದವು.

ಇದನ್ನೂ ಓದಿ: ದೇಶದ 4 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 6 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ: ತಮಿಳುನಾಡಿನಲ್ಲಿ ವಿಜಯ್, ಬೆಂಗಾಲ್‌ನಲ್ಲಿ ಸುವೇಂಧುಗೆ ಆಗ್ನಿಪರೀಕ್ಷೆ

ಆಹಾರವಿಲ್ಲ, ಮಾಹಿತಿಯೂ ಇಲ್ಲ – ಪ್ರಯಾಣಿಕರ ಆಕ್ರೋಶ:

ರೈಲುಗಳು ಅರ್ಧದಲ್ಲೇ ನಿಂತರೂ ರೈಲ್ವೆ ಅಧಿಕಾರಿಗಳಾಗಲಿ, ಟಿಸಿ (TTE) ಅಥವಾ ಚಾಲಕರಾಗಲಿ ಯಾವುದೇ ಸ್ಪಷ್ಟ ಮಾಹಿತ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರಯಾಣಿಕರು ಗಂಭೀರ ಆರೋಪ ಮಾಡಿದ್ದಾರೆ.

“ಇನ್ನರ್ಧ ಗಂಟೆಯಲ್ಲಿ ಹೊರಡುತ್ತದೆ ಎಂದು ಹೇಳುತ್ತಾ ಅಧಿಕಾರಿಗಳು ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ಕಾಯಿಸಿದರು. ರೈಲಿನಲ್ಲಿ 60 ರಿಂದ 80 ವರ್ಷದ ಹಿರಿಯ ನಾಗರಿಕರು, ಮಧುಮೇಹ (Sugar) ಹಾಗೂ ಇತರ ಅನಾರೋಗ್ಯ ಪೀಡಿತ ಪ್ರಯಾಣಿಕರಿದ್ದರು. ಅವರಿಗೆ ಕನಿಷ್ಠ ಕುಡಿಯುವ ನೀರು, ಆಹಾರದ ವ್ಯವಸ್ಥೆಯಾಗಲಿ ಅಥವಾ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನಾಗಲಿ ಮಾಡಿಕೊಡಲಿಲ್ಲ” ಎಂದು ಪ್ರಯಾಣಿಕರು ರೈಲ್ವೆ ಇಲಾಖೆಯ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *