ಏಷ್ಯಾಕಪ್ ಹಾಕಿ ಕಿರೀಟ ಈಗ ಭಾರತದ ಮುಡಿಗೆ!: ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಬದಲಿಸಿ ಇತಿಹಾಸ ಬರೆದ ಆಶಿಶ್ ಪೂರ್ಣಿ

ಕಾಕಮಿಗಹರಾ : ಭಾರತದ ಯುವ ಹಾಕಿ ಪಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಜಪಾನ್​​ನಲ್ಲಿ ನಡೆದ 2026ರ ಪುರುಷರ 18 ವರ್ಷದೊಳಗಿನವರ (U-18) ಹಾಕಿ ಏಷ್ಯಾಕಪ್‌ನ ರೋಮಾಂಚಕ ಫೈನಲ್‌ ಪಂದ್ಯದಲ್ಲಿ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವು ಆತಿಥೇಯ ಜಪಾನ್ ತಂಡವನ್ನು 4-1 ಗೋಲುಗಳ ಬೃಹತ್ ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಜಪಾನ್‌ ಸವಾಲನ್ನು ಧೂಳೀಪಟ ಮಾಡಿದ ಭಾರತ ಭವ್ಯ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಭಾರತದ ಈ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಸ್ಟಾರ್ ಆಟಗಾರ ಆಶಿಶ್ ತಾನಿ ಪೂರ್ಣಿ ಭರ್ಜರಿ ಹ್ಯಾಟ್ರಿಕ್ ಗೋಲು ಸಿಡಿಸಿ ತಂಡದ ಬಿಗ್ ಹೀರೊ ಆಗಿ ಹೊರಹೊಮ್ಮಿದ್ದಾರೆ.

ಪಂದ್ಯದ ಆರಂಭದ ಮೊದಲ ನಿಮಿಷದಿಂದಲೇ ಭಾರತ ತಂಡವು ಆತಿಥೇಯ ಜಪಾನ್ ಮೇಲೆ ತೀವ್ರ ಒತ್ತಡ ಹೇರಿತು. ಪಂದ್ಯದ 2ನೇ ನಿಮಿಷದಲ್ಲೇ ಭಾರತಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಆಶಿಶ್ ತಾನಿ ಪೂರ್ಣಿ ಅದ್ಭುತವಾಗಿ ಗೋಲಾಗಿ ಪರಿವರ್ತಿಸಿ ಟೀಮ್ ಇಂಡಿಯಾಕ್ಕೆ 1-0 ಮುನ್ನಡೆ ತಂದುಕೊಟ್ಟರು. ಮೊದಲ ಕ್ವಾರ್ಟರ್‌ನಲ್ಲಿ ಜಪಾನ್ ತಿರುಗೇಟು ನೀಡಲು ಪ್ರಯತ್ನಿಸಿದರೂ ಭಾರತದ ಬಲಿಷ್ಠ ರಕ್ಷಣಾ ಪಡೆ (Defense) ಆ ಎಲ್ಲ ಯತ್ನಗಳನ್ನು ವಿಫಲಗೊಳಿಸಿತು. ಇನ್ನು ಎರಡನೇ ಕ್ವಾರ್ಟರ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಭಾರತದ ಪರ 28ನೇ ನಿಮಿಷದಲ್ಲಿ ಆಶಿಶ್ ತಾನಿ ಪೂರ್ಣಿ ತಮ್ಮ ವೈಯಕ್ತಿಕ ಎರಡನೇ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಇದನ್ನೂ ಓದಿ:ಟಿ20 ಸರಣಿ, ಏಷ್ಯಾಕಪ್‌ಗೆ ಬಲಿಷ್ಠ ಭಾರತ ತಂಡ ಪ್ರಕಟ; ಶ್ರೇಯಸ್ ಅಯ್ಯರ್ ನೂತನ ನಾಯಕ, 15ರ ಹರೆಯದ ವೈಭವ್‌ಗೆ ಸ್ಥಾನ

ಮೂಗಿನ ಮೇಲೆ ಬೆರಳಿಡುವಂತಹ ಪ್ರದರ್ಶನ ನೀಡಿದ ಭಾರತದ ಪರ 30 ನಿಮಿಷದಲ್ಲಿ, ಪ್ರಹ್ಲಾದ್ ರಾಜ್‌ಭರ್ ನೀಡಿದ ಅದ್ಭುತ ಪಾಸ್ ಅನ್ನು ಬಳಸಿಕೊಂಡ ನಾಯಕ ಕೇತನ್ ಕುಶ್ವಾಹ ಭರ್ಜರಿ ಫೀಲ್ಡ್ ಗೋಲು ಹೊಡೆದರು. ಇದರಿಂದಾಗಿ ಭಾರತ ಪಂದ್ಯದ ಅರ್ಧಾವಧಿಯಲ್ಲೇ 3-0 ಅಂತರದ ದೊಡ್ಡ ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌ನ 34 ನಿಮಿಷದಲ್ಲಿ ಮತ್ತೊಮ್ಮೆ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲು ಪೆಟ್ಟಿಗೆಗೆ ತಳ್ಳಿದ ಆಶಿಶ್ ತಮ್ಮ ‘ಹ್ಯಾಟ್ರಿಕ್ ಗೋಲು’ ಪೂರೈಸಿದ್ದಲ್ಲದೆ ಸ್ಕೋರ್ ಅನ್ನು 4-0 ಏರಿಸಿದರು. ಕೊನೆಯ ಕ್ವಾರ್ಟರ್‌ನ 52 ನಿಮಿಷದಲ್ಲಿ ಜಪಾನ್‌ನ ನುಮಾಡಾ ಗಕು ಪೆನಾಲ್ಟಿ ಸ್ಟ್ರೋಕ್‌ ಮೂಲಕ ಏಕೈಕ ಸಮಾಧಾನಕರ ಗೋಲು ಗಳಿಸಿದರಾದರೂ, ಅಷ್ಟರಲ್ಲೇ ಭಾರತ 4-1 ಅಂತರದಲ್ಲಿ ಚಾಂಪಿಯನ್ ಆಗಿ ಸಂಭ್ರಮಿಸಿತು.

ಏಷ್ಯಾಕಪ್‌ನಲ್ಲಿ ಅಜೇಯರಾಗಿ ಉಳಿದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತೀಯ ಅಂಡರ್-18 ಪುರುಷರ ಹಾಕಿ ತಂಡದ ಪ್ರತಿಯೊಬ್ಬ ಆಟಗಾರನಿಗೆ ಹಾಕಿ ಇಂಡಿಯಾ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನ ಪ್ರಕಟಿಸಿದೆ. ಅಷ್ಟೇ ಅಲ್ಲದೆ, ತಂಡದ ಯಶಸ್ಸಿನ ಹಿಂದೆ ರಾತ್ರಿ-ಹಗಲು ಶ್ರಮಿಸಿದ ಸಹಾಯಕ ಸಿಬ್ಬಂದಿಯ (Support Staff) ಪ್ರತಿಯೊಬ್ಬ ಸದಸ್ಯನಿಗೂ ತಲಾ 1.5 ಲಕ್ಷ ರೂಪಾಯಿ ನೀಡಿ ಗೌರವಿಸಿದೆ. ಮತ್ತೊಂದೆಡೆ, ಟೂರ್ನಿಯಲ್ಲಿ ಅದ್ಭುತ ಹೋರಾಟದ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದುಕೊಂಡ ಭಾರತೀಯ ಅಂಡರ್-18 ಮಹಿಳಾ ಹಾಕಿ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೂ ತಲಾ 1 ಲಕ್ಷ ರೂಪಾಯಿ ನಗದು ಪ್ರಶಸ್ತಿಯನ್ನು ಘೋಷಿಸಲಾಗಿದೆ. ಹಾಗೆಯೇ ಮಹಿಳಾ ತಂಡದ ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ ತಲಾ 50,000 ರೂಪಾಯಿ ನಗದು ಬಹುಮಾನವನ್ನು ನೀಡುವುದಾಗಿ ಹಾಕಿ ಇಂಡಿಯಾ ತಿಳಿಸಿದೆ. ಈ ನಗದು ಬಹುಮಾನ ಪ್ರಕಟಣೆಯು ಯುವ ಆಟಗಾರರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು