ಸುಳ್ಯ: ಕಳ್ಳತನ ಹಾಗೂ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಎರಡು ಹಳೆಯ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ (JMFC) ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಅಜ್ಜಾವರ ನಿವಾಸಿ ಎ.ಎಂ. ಅಜೀಜ್ ಎಂಬಾತನನ್ನು ಅಪರಾಧಿ ಎಂದು ಘೋಷಿಸಿರುವ ನ್ಯಾಯಾಲಯವು ಭಾರಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ದಮಯಂತಿ ಸೋಮಯ್ಯ ಅವರು ಈ ಪ್ರಕರಣಗಳ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.
2018ರಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಪ್ರಕಾರ, ಆರೋಪಿ ಅಜೀಜ್ ಪೊಲೀಸ್ ಕಸ್ಟಡಿಯಿಂದ ದೂರು ನೀಡಿ ತಪ್ಪಿಸಿಕೊಂಡಿದ್ದನು. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 224 ರ ಅಡಿಯಲ್ಲಿ ದಾಖಲಾಗಿದ್ದ ಈ ಅಪರಾಧಕ್ಕಾಗಿ ನ್ಯಾಯಾಲಯವು ಆತನಿಗೆ 1 ವರ್ಷದ ಸಾಧಾರಣ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 45 ದಿನಗಳ ಕಾಲ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಇದೇ ವೇಳೆ 2006ರಲ್ಲಿ ದಾಖಲಾಗಿದ್ದ ಹಳೆಯ ಕಳ್ಳತನ ಪ್ರಕರಣದಲ್ಲೂ ಆತನ ಮೇಲಿನ ಆರೋಪ ಸಾಬೀತಾಗಿದೆ. ಐಪಿಸಿ ಸೆಕ್ಷನ್ 457 ಮತ್ತು 380 ರ ಅಡಿಯಲ್ಲಿ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ. ಸೆಕ್ಷನ್ 457ರ ಅಡಿಯಲ್ಲಿ ಅಕ್ರಮವಾಗಿ ಮನೆ ನುಗ್ಗಿದ ಅಪರಾಧಕ್ಕೆ 3 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಲಾಗಿದೆ (ದಂಡ ಕಟ್ಟದಿದ್ದರೆ 45 ದಿನ ಹೆಚ್ಚುವರಿ ಜೈಲು). ಸೆಕ್ಷನ್ 380ರ ಅಡಿಯಲ್ಲಿ ಕಳ್ಳತನ ಮಾಡಿದ ಅಪರಾಧಕ್ಕೆ ಮತ್ತೊಂದು 3 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿ ಸುಳ್ಯ ನ್ಯಾಯಾಲಯವು ಆದೇಶಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


