ಬಿಜೆಪಿ ಶಾಸಕ ಶರಣು ಸಲಗಾರ್​​ಗೆ ‘ನಾನ್‌ಬೈಲೆಬಲ್ ವಾರಂಟ್’ ಶಾಕ್!: ಯಾವುದೇ ಕ್ಷಣದಲ್ಲೂ ಬಂಧನ ಸಾಧ್ಯತೆ

ಬೀದರ್: ಪ್ರಚೋದನಾತ್ಮಕ ಗಲಾಟೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗಾರ್ ಅವರಿಗೆ ಕಠಿಣ ಕಾನೂನು ಸಂಕಷ್ಟ ಎದುರಾಗಿದೆ. ಬೆಂಗಳೂರಿನ 42ನೇ ಎಸಿಜೆಎಂ (ACJM) ವಿಶೇಷ ನ್ಯಾಯಾಲಯವು ಶಾಸಕರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ (Non-Bailable Warrant) ಜಾರಿಗೊಳಿಸಿದ್ದು, ಅವರು ಸದ್ಯ ಬಂಧನದ ಭೀತಿಯಲ್ಲಿದ್ದಾರೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಪೊಲೀಸರು ಶಾಸಕರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.

2023ರ ಜುಲೈ 1ರಂದು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆದಿದ್ದ ಘಟನೆಯೇ ಈ ಇಂದಿನ ಕಾನೂನು ಕ್ರಮಕ್ಕೆ ಮೂಲ ಕಾರಣವಾಗಿದೆ. ಅಕ್ರಮ ಗೋಹತ್ಯೆ ತಡೆಯುವ ನೆಪದಲ್ಲಿ ಶಾಸಕ ಶರಣು ಸಲಗಾರ್ ಅವರು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ತೀವ್ರ ಗಲಾಟೆ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ನ್ಯಾಯಾಲಯವು, ಸುದೀರ್ಘ ವಿಚಾರಣೆಗಾಗಿ ಕೋರ್ಟ್‌ಗೆ ಖುದ್ದಾಗಿ ಹಾಜರಾಗುವಂತೆ ಶಾಸಕರಿಗೆ ಸರಣಿ ನೋಟಿಸ್‌ಗಳನ್ನು ಜಾರಿ ಮಾಡಿತ್ತು. ಆದರೆ, ಶಾಸಕರು ಸತತವಾಗಿ ನ್ಯಾಯಾಲಯದ ಸಮನ್ಸ್‌ಗಳನ್ನು ಕಡೆಗಣಿಸಿ ಗೈರಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹುಲಿಕಲ್ ಘಾಟ್‌ನಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ‘ದುರ್ಗಾಂಬಾ’ ಬಸ್

ಶಾಸಕರ ಈ ಬೇಜವಾಬ್ದಾರಿ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ 42ನೇ ಎಸಿಜೆಎಂ ನ್ಯಾಯಾಲಯವು ಕೊನೆಗೂ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಈ ಆದೇಶದ ಅನ್ವಯ ಪೊಲೀಸರು ಯಾವುದೇ ಕ್ಷಣದಲ್ಲಾದರೂ ಶಾಸಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಬಹುದಾಗಿದೆ. ಕೋರ್ಟ್ ಆದೇಶ ಬರುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಶಾಸಕರನ್ನು ವಶಕ್ಕೆ ಪಡೆಯಲು ಅವರ ಬಸವಕಲ್ಯಾಣದ ಸ್ವಗೃಹಕ್ಕೆ ಧಾವಿಸಿದ್ದರು. ಆದರೆ ಶಾಸಕರು ಮನೆಯಲ್ಲಿ ಲಭ್ಯವಿಲ್ಲದ ಕಾರಣ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ. ಸದ್ಯ ಶಾಸಕ ಶರಣು ಸಲಗಾರ್ ಪೊಲೀಸರ ಕಣ್ಣು ತಪ್ಪಿಸಿ ಅಂಡರ್‌ಗ್ರೌಂಡ್ ಆಗಿದ್ದು, ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು